
ಭಜನೆ ಮತ್ತು ಭಜಕರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಕಡಬ ಠಾಣೆ ಮೂಲಕ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಲಾಗಿದೆ.


ಕಡಬ: ಭಜನೆ ಮತ್ತು ಭಜಕರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ದ ಕಡಬ ಪೊಲೀಸರ ಮೂಲಕ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಲಾಗಿದೆ.
ಬರಹವು ಹಿಂದೂ ಧರ್ಮದ ಶ್ರದ್ಧಾ ಭಕ್ತಿ ಹಾಗೂ ಭಜನಾ ಪರಂಪರೆಗೆ ಧಕ್ಕೆ ತರುವಂತಿದೆ ಎಂದು ಆರೋಪಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಕಡಬ ತಾಲೂಕು ಘಟಕದ ಅಧ್ಯಕ್ಷ ಸುಂದರ ಗೌಡ ಬಿಳಿನೆಲೆ ಅವರು ಕಡಬ ಪೊಲೀಸರ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ.


ಒಬ್ಬ ಜವಾಬ್ದಾರಿಯುತ ಸರ್ಕಾರಿ ಅಧಿಕಾರಿಯಾಗಿ ಸಮಾಜದಲ್ಲಿ ಅಶಾಂತಿ ಮೂಡಿಸುವ ಮತ್ತು ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡುವ ಕೆಲಸವನ್ನು ಇವರು ಮಾಡುತ್ತಿದ್ದಾರೆ. ಈ ಹಿಂದೆಯೂ ಇವರು ಇದೇ ರೀತಿ ನಡೆದುಕೊಂಡಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಈ ದೂರಿನ ಬೆನ್ನಲ್ಲೇ ಬೆಳಂದೂರು ಗ್ರಾಮದ ನಿವಾಸಿಯಾಗಿರುವ ವ್ಯಕ್ತಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮತ್ತೊಂದು ಪೋಸ್ಟ್ ಹಾಕಿದ್ದಾರೆ. “ಭಜನೆ ಯುವ ಜನತೆಯ ದಾರಿ ತಪ್ಪಿಸುತ್ತಿದೆ!? ಪೊಲೀಸರು ಎಚ್ಚೆತ್ತುಕೊಳ್ಳಬೇಕು” ಎಂಬ ಬರಹದೊಂದಿಗೆ, ದೇವರ ಹೆಸರಿನಲ್ಲಿ ಅನೈತಿಕ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಹಾಡುಗಳನ್ನು ಹಾಕಿ ರಸ್ತೆಯಲ್ಲಿ ಕುಣಿಯುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಬರೆದುಕೊಂಡಿದ್ದಾರೆ.
