ಡೈರಿ ಫಾರ್ಮಿಂಗ್ ಉತ್ತೇಜಿಸಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ

kadaba times

ಕಡಬ ತಾಲೂಕಿನ ಕೊಯಿಲ ಪಶುವೈದ್ಯಕೀಯ ಕಾಲೇಜು ಮುಂದಿನ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿದೆ. ಸಚಿವ ಕೆ. ವೆಂಕಟೇಶ್ ಕಾಮಗಾರಿ ಪರಿಶೀಲಿಸಿ, ವಿ.ಸಿ.ಐ ಅನುಮತಿ ಪಡೆದ ನಂತರ ತರಗತಿ ಆರಂಭವಾಗಲಿವೆ ಎಂದು ತಿಳಿಸಿದ್ದಾರೆ.

kadaba times
uniq

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲದಲ್ಲಿ  ನಿರ್ಮಾಣವಾಗುತ್ತಿರುವ ಪಶುವೈದ್ಯಕೀಯ ಕಾಲೇಜನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.

ಕೊಯಿಲದಲ್ಲಿ  ನಡೆಯುತ್ತಿರುವ ಕಾಲೇಜು ಕಾಮಗಾರಿಯನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ಕಾಲೇಜು ಆರಂಭಿಸಲು ಭಾರತೀಯ ಪಶುವೈದ್ಯಕೀಯ ಮಂಡಳಿ (VCI) ಅನುಮತಿ ಪಡೆಯಬೇಕಿದೆ. ಇದಕ್ಕೂ ಮುನ್ನ ಕಾಲೇಜಿನಲ್ಲಿರುವ ಕೆಲವು ಸಣ್ಣಪುಟ್ಟ ನ್ಯೂನತೆಗಳನ್ನು ಸರಿಪಡಿಸಿ, ಮೊದಲ ಮತ್ತು ಎರಡನೇ ವರ್ಷದ ತರಗತಿಗಳಿಗೆ ಬೇಕಾದ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲು ಸೂಚನೆ ನೀಡಲಾಗಿದೆ ಎಂದರು.

ಈ ಕಾಲೇಜು ಸಂಕೀರ್ಣದ ಕಟ್ಟಡಗಳ ನಿರ್ಮಾಣಕ್ಕಾಗಿ ಈಗಾಗಲೇ 136 ಕೋಟಿ ರೂ. ಬಳಸಲಾಗಿದ್ದು, ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹೆಚ್ಚುವರಿಯಾಗಿ 18 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಾಲೇಜು, ಹಾಸ್ಟೆಲ್, ಪ್ರಯೋಗಾಲಯ ಸೇರಿದಂತೆ ಮೂಲಸೌಕರ್ಯಗಳು ಸಿದ್ಧಗೊಂಡಿವೆ. ಈಗಾಗಲೇ 13 ಬೋಧಕ ಹುದ್ದೆಗಳು ಹಾಗೂ 32 ಬೋಧಕೇತರ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

kadaba times
kadaba times
ರೈತರ ಸಮಸ್ಯೆಗಳಿಗೆ ಸ್ಪಂದನೆ

ಜಾನುವಾರು ವಿಮೆ: ವಿಮಾ ಕಂಪನಿಗಳು ರೈತರ ಕ್ಲೈಮ್‌ಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ, ಬೆಂಗಳೂರಿನ ಕೇಂದ್ರ ಕಚೇರಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.

ಕಳಪೆ ಕಾಮಗಾರಿ ವಿರುದ್ಧ ಕಿಡಿ: ಮಳೆಗಾಲದಲ್ಲಿ ಕಾಲೇಜು ಕಟ್ಟಡದಲ್ಲಿ ನೀರು ಸೋರುತ್ತಿರುವ ಬಗ್ಗೆ ಗ್ರಾಮಸ್ಥರು ದೂರು ನೀಡಿದಾಗ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು ಕೂಡಲೇ ದುರಸ್ತಿ ಮಾಡುವಂತೆ ಆದೇಶಿಸಿದರು.  ಪುತ್ತೂರಿಗೆ ಪಶುವೈದ್ಯಕೀಯ ಪಾಲಿ ಕ್ಲಿನಿಕ್ ಮಂಜೂರಾಗಿದ್ದು, ಶೀಘ್ರದಲ್ಲೇ ಕಟ್ಟಡ ಕಾಮಗಾರಿ ಆರಂಭವಾಗಲಿದೆ.

ಹೈನುಗಾರಿಕೆಗೆ ಆದ್ಯತೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈನುಗಾರಿಕೆ ನಡೆಸುವವರ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವರು, ಡೈರಿ ಫಾರ್ಮಿಂಗ್ ಉತ್ತೇಜಿಸಲು ಯೋಜನೆಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಕೊಯಿಲ ಕೇಂದ್ರದಲ್ಲಿ ಅಪರೂಪದ ತಳಿಗಳ ಅಭಿವೃದ್ಧಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆಗೆ ಆದ್ಯತೆ ನೀಡಬೇಕು ಎಂದರು.

ಕೊಯ್ಲ ಪಶುವೈದ್ಯಕೀಯ ಕಾಲೇಜು ಸ್ಥಾಪನೆಯನ್ನು 2012-13ರ ಬಜೆಟ್‌ನಲ್ಲಿ ಅಂದಿನ ಸಿಎಂ ಡಿ.ವಿ. ಸದಾನಂದ ಗೌಡರು ಘೋಷಿಸಿದ್ದರು. 2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಅನುದಾನದ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ವಿಳಂಬವಾಗಿದ್ದ ಈ ಯೋಜನೆ ಈಗ ಅಂತಿಮ ಹಂತಕ್ಕೆ ತಲುಪಿದೆ. ಪರಿಶೀಲನಾ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪಶುಸಂಗೋಪನೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿನೋತ್ ಪ್ರಿಯಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Related Articles

Latest Articles