
ರಾಮಕುಂಜ ಗ್ರಾಮದ ಕಂಪದಲ್ಲಿ ಬಾವಿ ತೋಡುವಾಗ ಸ್ಫೋಟಕ ಸಿಡಿದು ಮನೆಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ ಸಿ.ಕೆ ಭೇಟಿ ನೀಡಿದ್ದು, ಕೋರ್ಟ್ ಅನುಮತಿ ಬಳಿಕ ಜೀವಂತ ಸ್ಫೋಟಕ ತೆರವುಗೊಳಿಸಲು ನಿರ್ಧರಿಸಲಾಗಿದೆ


ರಾಮಕುಂಜ: ಬಾವಿ ತೋಡುವ ಸಂದರ್ಭದಲ್ಲಿ ಕಲ್ಲು ಸೀಳಲು ಬಳಸಿದ ಸ್ಫೋಟಕಗಳು ಆಕಸ್ಮಿಕವಾಗಿ ಸ್ಫೋಟಗೊಂಡು ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗಿರುವ ಘಟನೆ ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ನಡೆದಿದೆ. ಈ ಘಟನಾ ಸ್ಥಳಕ್ಕೆ ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರು ಮಾ. 11ರಂದು ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೈಸೂರು ನಿವಾಸಿ ಸೋಮಶೇಖರ ಎಂಬವರು ರಾಮಕುಂಜದ ಕಂಪ ಎಂಬಲ್ಲಿರುವ ತಮ್ಮ ಜಾಗದಲ್ಲಿ ಬಾವಿ ತೋಡುವ ಕೆಲಸ ಮಾಡಿಸುತ್ತಿದ್ದರು. ಕಲ್ಲು ಸೀಳುವ ಉದ್ದೇಶದಿಂದ ಕೋಡಿಂಬಾಳ ನಿವಾಸಿ ಶಿವರಾಮ ಎಂಬವರು ಬಾವಿಯೊಳಗೆ ಸ್ಫೋಟಕ ಸಿಡಿಸಿದ್ದರು. ಈ ವೇಳೆ ಸ್ಫೋಟದ ತೀವ್ರತೆಗೆ ಸಮೀಪದ ನಿವಾಸಿಗಳಾದ ವಾಮನ ಮೂಲ್ಯ ಹಾಗೂ ಕೆ.ಟಿ. ಮೋಹನ ಎಂಬವರ ಮನೆಗಳಿಗೆ ಹಾನಿಯುಂಟಾಗಿದೆ. ಈ ಬಗ್ಗೆ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.


ಬಾವಿಯೊಳಗೆ ಇನ್ನೂ ಆರು ಜೀವಂತ ಸ್ಫೋಟಕಗಳು ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ, ಮಾ. 10ರಂದು ಮಂಗಳೂರಿನಿಂದ ಬಾಂಬ್ ನಿಷ್ಕ್ರೀಯ ದಳ (BDDS) ಸ್ಥಳಕ್ಕೆ ಆಗಮಿಸಿತ್ತು. ಬಾವಿಯೊಳಗೆ ಇಳಿದ ಸಿಬ್ಬಂದಿಗಳು 6 ಸ್ಪೋಟಕಗಳ ಪೈಕಿ ಒಂದು ಸ್ಫೋಟಕವನ್ನು ಯಶಸ್ವಿಯಾಗಿ ತೆರವುಗೊಳಿಸಿದ್ದರು. ಆದರೆ ಉಳಿದ 5 ಸ್ಫೋಟಕಗಳನ್ನು ಕಂಪ್ರೆಸರ್ ಬಳಸಿ ತೆರವುಗೊಳಿಸುವುದು ಅಪಾಯಕಾರಿ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಕೋರ್ಟ್ ಅನುಮತಿ ಬಳಿಕ ಮುಂದಿನ ಕ್ರಮ
ಸ್ಥಳ ಪರಿಶೀಲನೆ ನಡೆಸಿದ ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರು, ಬಾವಿಯೊಳಗಿರುವ ಜೀವಂತ ಸ್ಫೋಟಕಗಳನ್ನು ತೆರವುಗೊಳಿಸುವುದು ಸೂಕ್ಷ್ಮ ವಿಚಾರವಾಗಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದು ಮುಂದಿನ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದಾರೆ. ಕೋರ್ಟ್ ಅನುಮತಿ ದೊರೆತ ಬಳಿಕ ತಜ್ಞರ ಸಮ್ಮುಖದಲ್ಲಿ ಸ್ಫೋಟಕಗಳನ್ನು ನಿಷ್ಕ್ರೀಯಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ.ಈ ಸಂದರ್ಭದಲ್ಲಿ ಕಡಬ ಎಸ್ಐ ಜಂಬೂರಾಜ್ ಮಹಾಜನ್ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
