
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪ ರಾಜಹಂಸ ಬಸ್ ಹಾಗೂ ಸ್ವಿಫ್ಟ್ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಮಂಗಳೂರು-ಬೆಂಗಳೂರು ರಸ್ತೆಯ ಗುಂಡ್ಯ ಸಮೀಪ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ದಾರುಣ ಅಪಘಾತವೊಂದು ಮೂರು ಜೀವಗಳನ್ನು ಬಲಿಪಡೆದಿದೆ.
ಕೆಎಸ್ಆರ್ಟಿಸಿ ರಾಜಹಂಸ ಬಸ್ ಮತ್ತು ಸ್ವಿಫ್ಟ್ ಡಿಸೈರ್ ಕಾರಿನ ನಡುವೆ ನಡೆದ ಈ ಮುಖಾಮುಖಿ ಡಿಕ್ಕಿ, ಕ್ಷಣಾರ್ಧದಲ್ಲಿ ಸುಂದರ ಬದುಕನ್ನು ಛಿದ್ರಗೊಳಿಸಿದೆ.ಕಾರಿನಲ್ಲಿದ್ದ ಮಾಜಿ ಎಪಿಎಂಸಿ ಸದಸ್ಯ ಚಂದ್ರಶೇಖರ ಶಿಶಿಲ, ಜನಾರ್ದನ ಗೌಡ ಕೇರಿಮಾರ್ ಉಜಿರೆ, ಕಕ್ಕಿಂಜೆ ಫೈನಾನ್ಸ್ ನ ಶ್ರೀಧರ ಗೌಡ ಮರಕಡ ಅರಳಿ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಕಾರಿನಲ್ಲಿದ್ದ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಉಜಿರೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.


ಗುಂಡ್ಯದ ಗಡಿ ದೇವಸ್ಥಾನದ ಸಮೀಪ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ರಕ್ತಸಿಕ್ತವಾಗಿದ್ದವರನ್ನು ಸ್ಥಳೀಯರ ನೆರವಿನೊಂದಿಗೆ ಹೊರತೆಗೆಯುವ ಕಾರ್ಯ ನಡೆಸಿದ್ದಾರೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಆಗಮಿಸಿದ್ದಾರೆ.
