ತಡ ರಾತ್ರಿ ದರ್ಗಾದ ಗೋರಿ ಅಗೆದ ಅನಾಮಿಕ; ವ್ಯಕ್ತಿ ಪೊಲೀಸರ ವಶಕ್ಕೆ

kadaba times

 ದರ್ಗಾದ ಹೊರಗಿನ ಗೋರಿಯನ್ನು ಅಗೆಯಲು ಯತ್ನಿಸಿದ ಅನಾಮಿಕ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಸರಗೋಡು ಮೂಲದ ಈ ವ್ಯಕ್ತಿ ಮಾನಸಿಕ ಅಸ್ವಸ್ಥನೆನ್ನಲಾಗಿದ್ದು, ಪ್ರಸ್ತುತ ಆಸ್ಪತ್ರೆಗೆ ದಾಖಲಿಸಲಾಗಿದೆ

kadaba times
uniq

ಸುಳ್ಯ: ಜಾಲ್ಸೂರು ಗ್ರಾಮದ ಮಾಪಳಡ್ಕ ದರ್ಗಾದ ಹೊರಭಾಗದಲ್ಲಿರುವ ಗೋರಿಯನ್ನು ಅನಾಮಿಕ ವ್ಯಕ್ತಿಯೊಬ್ಬ ರಾತ್ರಿ ವೇಳೆ ಅಗೆದು ಹಾಕಿರುವ ಆತಂಕಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್ 22ರ ತಡರಾತ್ರಿ ಈ ಘಟನೆ ನಡೆದಿದ್ದು, ಕೃತ್ಯವೆಸಗಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾರ್ಚ್ 22ರಂದು ರಾತ್ರಿ ಸುಮಾರು 9 ಗಂಟೆಯ ವೇಳೆಗೆ ದರ್ಗಾದ ಬಳಿ ಬಂದಿದ್ದ ಈ ವ್ಯಕ್ತಿ, ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಹಾರೆ ಮತ್ತು ಪಕ್ಕಾಸಿನಿಂದ ಗೋರಿಯನ್ನು ಅಗೆಯಲು ಆರಂಭಿಸಿದ್ದಾನೆ. ಶಬ್ದ ಕೇಳಿ ದರ್ಗಾದ ಪಕ್ಕದಲ್ಲಿದ್ದ ಸಂಸ್ಥೆಯ ಅಡುಗೆ ಸಿಬ್ಬಂದಿ ಮತ್ತು ಇತರರು ಸ್ಥಳಕ್ಕೆ ಧಾವಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಅಗೆಯುವುದನ್ನು ತಡೆಯಲು ಹೋದ ಸ್ಥಳೀಯರ ಮೇಲೆ ಆತ ಹಲ್ಲೆಗೂ ಮುಂದಾಗಿದ್ದಾನೆ ಎನ್ನಲಾಗಿದೆ.

ತಕ್ಷಣವೇ ಸಂಸ್ಥೆಯ ಅಧ್ಯಕ್ಷರಾದ ಎ.ಬಿ. ಅಶ್ರಫ್ ಸಅದಿ ಮತ್ತು ಸಮಿತಿಯ ಕಾರ್ಯದರ್ಶಿಯವರಿಗೆ ಮಾಹಿತಿ ನೀಡಲಾಯಿತು. ಅವರು ಸ್ಥಳಕ್ಕೆ ಆಗಮಿಸಿ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಸ್ಥಳೀಯರು ಹರಸಾಹಸ ಪಟ್ಟು ಆತನನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ.

kadaba times
kadaba times

ಮಾನಸಿಕ ಅಸ್ವಸ್ಥತೆ ಶಂಕೆ: ಬಂಧಿತ ವ್ಯಕ್ತಿ ಕಾಸರಗೋಡು ಜಿಲ್ಲೆಯ ಪರಪ್ಪೆ ನಿವಾಸಿ ಎಂದು ಗುರುತಿಸಲಾಗಿದೆ. ಗೋರಿ ಅಗೆಯುವ ಸಂದರ್ಭದಲ್ಲಿ ಆತ “ಇದು ನಮ್ಮ ಅಜ್ಜನ ಗೋರಿ” ಎಂದು ಕೂಗುತ್ತಿದ್ದ ಎನ್ನಲಾಗಿದ್ದು, ಆತ ಮಾನಸಿಕ ಅಸ್ವಸ್ಥತೆಯಿಂದ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ. ಸದ್ಯ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಕೃತ್ಯವೆಸಗಿದ ವ್ಯಕ್ತಿಯು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವುದರಿಂದ ಆತನ ಭವಿಷ್ಯ ಮತ್ತು ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡ ಧಾರ್ಮಿಕ ಶ್ರದ್ಧಾ ಕೇಂದ್ರದ ಪದಾಧಿಕಾರಿಗಳು, ಆತನ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವುದು ಬೇಡವೆಂದು ಪೊಲೀಸರಿಗೆ ಲಿಖಿತವಾಗಿ ಮನವಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಯಾವುದೇ ಎಫ್‌ಐಆರ್ (FIR) ದಾಖಲಾಗಿರುವುದಿಲ್ಲ ಎಂದು ತಿಳಿದುಬಂದಿದೆ.

Related Articles

Latest Articles