ಪೆರಿಯಶಾಂತಿ ಬಳಿ ಲಾರಿ ಅಡ್ಡಗಟ್ಟಿ ಹಲ್ಲೆಗೈದು ದರೋಡೆ ಮಾಡಿದ್ದ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಗೆ ಮತ್ತೆ ಜೈಲು ಶಿಕ್ಷೆ

ಬೆಳ್ತಂಗಡಿ ನ್ಯಾಯಾಲಯದಿಂದ ಜಾಮೀನು ವಜಾ

kadaba times

2017ರಲ್ಲಿ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ್ದ ಪ್ರಕರಣದ ಆರೋಪಿ ಮಾಗಡಿಯ ನಂಜುಂಡನ ಜಾಮೀನು ಅರ್ಜಿಯನ್ನು ಬೆಳ್ತಂಗಡಿ ನ್ಯಾಯಾಲಯ ವಜಾಗೊಳಿಸಿದೆ. ಎಪಿಪಿ ದಿವ್ಯರಾಜ್ ಹೆಗ್ಡೆ ಪುತ್ತೂರು ಅವರ ವಾದ ಪುರಸ್ಕರಿಸಿದ ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ

kadaba times
uniq

ಏಳು ವರ್ಷಗಳ ಹಿಂದೆ ಲಾರಿ ಚಾಲಕನೊಬ್ಬನನ್ನು ಅಡ್ಡಗಟ್ಟಿ, ಚೂರಿಯಿಂದ ಇರಿದು ಹಣ ಮತ್ತು ಮೊಬೈಲ್ ದೋಚಿದ್ದ ಪ್ರಕರಣದ ಪ್ರಮುಖ ಆರೋಪಿ ನಂಜುಂಡನಿಗೆ ನ್ಯಾಯಾಲಯ ಮತ್ತೆ ಜೈಲು ದರ್ಶನ ಮಾಡಿಸಿದೆ. ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನ ಜಾಮೀನು ಅರ್ಜಿಯನ್ನು ಬೆಳ್ತಂಗಡಿ ನ್ಯಾಯಾಲಯವು ಶುಕ್ರವಾರ (ಮಾ.13) ವಜಾಗೊಳಿಸಿದೆ.

ನಡೆದಿದ್ದೇನು? ಆ ಭೀಕರ ರಾತ್ರಿಯ ನೆನಪು

ಅದು 2017ರ ಏಪ್ರಿಲ್ 8ರ ರಾತ್ರಿ. ಚಿಕ್ಕಮಗಳೂರಿನ ರಾಘವೇಂದ್ರ ಎಂಬವರು ಸಿಮೆಂಟ್ ಲೋಡ್ ಮಾಡಿಕೊಂಡು ಉಡುಪಿಯತ್ತ ಲಾರಿ ಚಲಾಯಿಸುತ್ತಿದ್ದರು. ರಾತ್ರಿ ಸುಮಾರು 10.15ರ ವೇಳೆಗೆ ಬೆಳ್ತಂಗಡಿಯ ರೆಖ್ಯ ಗ್ರಾಮದ ಎಂಜಿರ ಎಂಬಲ್ಲಿ ಮೂತ್ರಶಂಕೆಗಾಗಿ ಲಾರಿ ನಿಲ್ಲಿಸಿದ್ದರು. ಅವರು ಮರಳಿ ಲಾರಿಗೆ ಹತ್ತುವಷ್ಟರಲ್ಲಿ ಕಾಲನ್ ರೂಪದಲ್ಲಿ ಬಂದ ಕಾರೊಂದು ಲಾರಿಗೆ ಅಡ್ಡವಾಗಿ ನಿಂತಿತ್ತು.

ಕಾರಿನಿಂದ ಇಳಿದ ಐವರು ದುಷ್ಕರ್ಮಿಗಳು ಏಕಾಏಕಿ ಲಾರಿಯೊಳಗೆ ನುಗ್ಗಿದರು. ಚೂರಿ ತೋರಿಸಿ ಬೆದರಿಸಿದಾಗ “ನನ್ನಲ್ಲಿ ಹಣವಿಲ್ಲ” ಎಂದಿದ್ದಕ್ಕೆ ಚಾಲಕ ರಾಘವೇಂದ್ರ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿತ್ತು. ಕಾಲಿನ ಮೊಣಗಂಟಿಗೆ, ಎದೆಗೆ ಹಾಗೂ ಭುಜಕ್ಕೆ ಚೂರಿಯಿಂದ ಇರಿದು ಗಾಯಗೊಳಿಸಿದ್ದ ದರೋಡೆಕೋರರು, ಕಿಸೆಯಲ್ಲಿದ್ದ 17 ಸಾವಿರ ನಗದು, ಎಟಿಎಂ ಕಾರ್ಡ್ ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.

kadaba times
kadaba times
ದರೋಡೆಕೋರರ ಫೋನ್‌ನಿಂದ ಸಿಕ್ಕ ಸುಳಿವು

ದರೋಡೆಕೋರರು ಅವಸರದಲ್ಲಿ ಪರಾರಿಯಾಗುವಾಗ ತಮ್ಮದೇ ನೋಕಿಯಾ ಫೋನ್ ಅನ್ನು ಲಾರಿಯಲ್ಲೇ ಬಿಟ್ಟು ಹೋಗಿದ್ದರು. ಇದೇ ಸುಳಿವು ಪೊಲೀಸರಿಗೆ ಆರೋಪಿಗಳ ಪತ್ತೆ ಹಚ್ಚಲು ಸಹಕಾರಿಯಾಯಿತು. ಧರ್ಮಸ್ಥಳ ಪೊಲೀಸರು ಮಯಾಕೃಷ್ಣ, ಮಣಿಕಂಠ ಮೂರ್ತಿ, ಪಿಂಟು, ಕುರಲ್ ಮತ್ತು ನಂಜುಂಡ ಎಂಬುವವರನ್ನು ಬಂಧಿಸಿದ್ದರು.

ತಲೆಮರೆಸಿಕೊಂಡಿದ್ದ ನಂಜುಂಡನಿಗೆ ಸಿಗದ ಜಾಮೀನು

ಬಂಧನಕ್ಕೊಳಗಾಗಿದ್ದ ಆರೋಪಿ ನಂಜುಂಡ ನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ನಾಪತ್ತೆಯಾಗಿದ್ದ. ಇತ್ತೀಚೆಗಷ್ಟೇ ಪೊಲೀಸರು ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿ ಜೈಲಿಗಟ್ಟಿದ್ದರು. ಈ ಹಿನ್ನೆಲೆಯಲ್ಲಿ ನಂಜುಂಡ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಆದರೆ, ಸರ್ಕಾರದ ಪರವಾಗಿ ಬಲವಾದ ವಾದ ಮಂಡಿಸಿದ ಸಹಾಯಕ ಸರ್ಕಾರಿ ಅಭಿಯೋಜಕ (APP) ದಿವ್ಯರಾಜ್ ಹೆಗ್ಡೆ ಪುತ್ತೂರು, ಆರೋಪಿಯ ಹಿನ್ನೆಲೆ ಮತ್ತು ಈ ಹಿಂದೆ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದನ್ನು ಎತ್ತಿ ತೋರಿಸಿದರು. ಈ ವಾದವನ್ನು ಪುರಸ್ಕರಿಸಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ರಾಜೇಂದ್ರ ಪ್ರಸಾದ್, ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.

Related Articles

Latest Articles