ಸುಳ್ಯ ವಿಧಾನ ಸಭಾ ಕ್ಷೇತ್ರ: ಸೊಸೈಟಿ ಚುನಾವಣೆಯಲ್ಲಿ ಜಾತಿ ರಾಜಕೀಯ- ಕಾಣದ ಕೈಗಳ ಹಸ್ತಕ್ಷೇಪ, ಬಿಜೆಪಿ ಕಾರ್ಯಕರ್ತರ ಸಾಮೂಹಿಕ ರಾಜಿನಾಮೆ!

kadaba times

ಸುಳ್ಯದ  ಉಬರಡ್ಕ ಮಿತ್ತೂರು ಸಹಕಾರಿ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಯಲ್ಲಿ ಜಾತಿ ರಾಜಕೀಯ ನಡೆದಿದೆ ಎಂದು ಆರೋಪಿಸಿ, ಉಬರಡ್ಕ ಗ್ರಾಮದ 45ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ ಕ್ಷೇತ್ರದಲ್ಲಿ ಸಂಚಲನ.

kadaba times
uniq

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಉಬರಡ್ಕ ಗ್ರಾಮದಲ್ಲಿ ಬಿಜೆಪಿ ಪಾಳಯದಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಉಬರಡ್ಕ ಮಿತ್ತೂರು ಸಹಕಾರಿ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ‘ಜಾತಿ ರಾಜಕೀಯ’ ನಡೆದಿದೆ ಎಂದು ಗಂಭೀರವಾಗಿ ಆರೋಪಿಸಿರುವ ಗ್ರಾಮದ ಸುಮಾರು 45ಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಘಟನೆಯ ಹಿನ್ನೆಲೆ: ಇತ್ತೀಚೆಗಷ್ಟೇ ಉಬರಡ್ಕ ಮಿತ್ತೂರು ಸಹಕಾರಿ ಸಂಘದ ನಿರ್ದೇಶಕರಾದ ರಾಜೇಶ್ ಭಟ್ ನೆಕ್ಕಿಲ ಮತ್ತು ಪ್ರಭಾಕರ ಅಮೈ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಸೊಸೈಟಿಯ ಉನ್ನತ ಹುದ್ದೆಗಳ ಆಯ್ಕೆಯಲ್ಲಿ ಪಕ್ಷದ ಕೆಲವು ನಾಯಕರ ನಿಲುವು ಮತ್ತು ಕಾಣದ ಕೈಗಳ ಹಸ್ತಕ್ಷೇಪದಿಂದ ಕಾರ್ಯಕರ್ತರು ತೀವ್ರ ಅಸಮಾಧಾನಗೊಂಡಿದ್ದಾರೆ.

ಕಾರ್ಯಕರ್ತರ ಆಕ್ರೋಶ: “ಉಬರಡ್ಕ ಗ್ರಾಮದ ಪಕ್ಷ ಸಂಘಟನೆಯಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಪಕ್ಷದ ಹಿತದೃಷ್ಟಿಯಿಂದ ಪೂರಕವಾಗಿಲ್ಲ. ಹಿರಿಯ ಕಾರ್ಯಕರ್ತರನ್ನು ಕಡೆಗಣಿಸಿ, ಜಾತಿ ರಾಜಕೀಯಕ್ಕೆ ಮಣೆ ಹಾಕಲಾಗುತ್ತಿದೆ. ಕಾಣದ ಕೈಗಳ ಆಟದಿಂದ ಶ್ರಮಜೀವಿ ಕಾರ್ಯಕರ್ತರಾದ ನಮಗೆ ತೀವ್ರ ನೋವಾಗಿದೆ. ಈ ಕುರಿತು ಪಕ್ಷದ ಪ್ರಮುಖರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ,” ಎಂದು ರಾಜೀನಾಮೆ ನೀಡಿದ ಕಾರ್ಯಕರ್ತರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

kadaba times
kadaba times

ಶಕ್ತಿ ಕೇಂದ್ರದ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಕೆ: ಮನನೊಂದ 45ಕ್ಕೂ ಅಧಿಕ ಕಾರ್ಯಕರ್ತರು ಸಭೆ ಸೇರಿ, ಚರ್ಚಿಸಿದ ಬಳಿಕ ತಮ್ಮ ಸಾಮೂಹಿಕ ರಾಜೀನಾಮೆ ಪತ್ರವನ್ನು ಉಬರಡ್ಕ ಮಿತ್ತೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಸಂದೀಪ್ ಮದುವೆಗದ್ದೆ ಅವರಿಗೆ ಹಸ್ತಾಂತರಿಸಿದ್ದಾರೆ.

ಶಾಸಕಿಯ ಕ್ಷೇತ್ರದಲ್ಲಿ ಸಂಚಲನ: ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರ ತವರು ನೆಲ ಹಾಗೂ ಬಿಜೆಪಿಯ ಭದ್ರಕೋಟೆ ಎಂದೇ ಕರೆಸಿಕೊಳ್ಳುವ  ಸುಳ್ಯದಲ್ಲಿ  ಈ ಮಟ್ಟದ ಬಂಡಾಯ ಎದ್ದಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ವರಿಷ್ಠರು ಈ ಭಿನ್ನಮತವನ್ನು ಹೇಗೆ ಶಮನ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Related Articles

Latest Articles