
ಐತ್ತೂರಿನಲ್ಲಿ ಕಾಡುಕೋಣ ಕೊಂದ ಪ್ರಕರಣದ ಆರೋಪಿಗಳಿಗೆ ಜಾಮೀನು ಲಭ್ಯವಾಗಿದೆ. ಬಂದೂಕು ಪತ್ತೆಯಾಗದಿದ್ದರೂ, ಪ್ರಭಾವಿಗಳ ಒತ್ತಡಕ್ಕೆ ಮಣಿದು ತನಿಖೆ ವಿಳಂಬವಾಗುತ್ತಿದೆಯೇ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಎದ್ದಿದೆ.


ಕಡಬ: ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಐತ್ತೂರಿನ ಕೆ.ಎಫ್.ಡಿಸಿ ಅರಣ್ಯ ನಡುತೋಪಿನಲ್ಲಿ ನಡೆದಿದ್ದ ವನ್ಯಜೀವಿ ಗಂಡು ಕಾಡುಕೋಣ ಬೇಟೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅತ್ಯಂತ ಗಂಭೀರ ಸ್ವರೂಪದ ಈ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ದೊರೆತಿರುವುದು ಅರಣ್ಯ ಇಲಾಖೆಯ ನಡೆ ಮತ್ತು ಕಾನೂನು ಹೋರಾಟದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪ್ರಕರಣದ ಹಿನ್ನೆಲೆ: ಐತ್ತೂರಿನ ಅರಣ್ಯದಲ್ಲಿ ಕಾಡುಕೋಣವನ್ನು ಬಂದೂಕಿನಿಂದ ಕೊಂದು ಮಾಂಸ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ್ದ ಅರಣ್ಯ ಇಲಾಖೆ ಪ್ರಕರಣವನ್ನು ಭೇದಿಸಿತ್ತು. ಈ ಸಂಬಂಧ ಮಣಿಕಂಠನ್, ಭುವನೇಶ್ವರ, ಜೀವನ್, ಸಜ್ಜಿನ್ ಮತ್ತು ಜೈನ್ ವರ್ಕಿ ಎಂಬುವವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ವಿವಿಧ ಕಠಿಣ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಸಿಡಿಆರ್ ವರದಿಯಲ್ಲಿ ದೃಢಪಟ್ಟ ಸಾಕ್ಷ್ಯಗಳು: ಆರೋಪಿ ಎಂದು ಅರಣ್ಯ ಅಧಿಕಾರಿಗಳು ಉಲ್ಲೇಖಿಸಿರುವ ಮಣಿಕಂಠನ್ ಘಟನಾ ಸ್ಥಳದಲ್ಲಿ ಇದ್ದ ಬಗ್ಗೆ ಸಿಡಿಆರ್ (Call Detail Record) ವರದಿಯಿಂದ ಸ್ಪಷ್ಟವಾಗಿ ದೃಢಪಟ್ಟಿದೆ. ಅಲ್ಲದೆ, ಕೃತ್ಯಕ್ಕೆ ಬಳಸಲಾದ ಕೆ.ಎ. 21 ಏ 1443 ಸಂಖ್ಯೆಯ ಹೀರೋ ಎಲೆಕ್ಟ್ರಿಕ್ ಬೈಕ್ ತನ್ನದೇ ಎಂದು ಆತ ಒಪ್ಪಿಕೊಂಡಿದ್ದಾನೆ. ಘಟನೆ ನಡೆದ ಬಳಿಕ ಈತ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ಪರಾರಿಯಾಗಿದ್ದ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.


ಬಂದೂಕು ಎಲ್ಲಿ? ಪ್ರಭಾವಿ ಬೇಟೆಗಾರನ ರಕ್ಷಣೆ ಯಾರಿಂದ?: ಈ ಪ್ರಕರಣದಲ್ಲಿ ಅತ್ಯಂತ ಮುಖ್ಯವಾದ ಸಾಕ್ಷ್ಯವೆಂದರೆ ಬೇಟೆಯಾಡಲು ಬಳಸಿದ ಬಂದೂಕು. ಅರಣ್ಯ ಇಲಾಖೆ ಇದುವರೆಗೂ ಆ ಬಂದೂಕನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. “ಶೋಧನಾ ಕಾರ್ಯ ಮುಂದುವರಿಯುತ್ತಿದೆ” ಎಂದು ಇಲಾಖೆ ನ್ಯಾಯಾಲಯಕ್ಕೆ ತಿಳಿಸಿದೆಯಾದರೂ, ಇದರ ಹಿಂದೆ ಪ್ರಭಾವಿ ವ್ಯಕ್ತಿಯೊಬ್ಬನ ಕೈವಾಡವಿರುವ ಶಂಕೆ ಬಲವಾಗಿದೆ. ಆ ಪ್ರಮುಖ ಬೇಟೆಗಾರನನ್ನು ರಕ್ಷಿಸಲು ಅರಣ್ಯಾಧಿಕಾರಿಗಳು ಯಾರದ್ದೋ ಒತ್ತಡಕ್ಕೆ ಒಳಗಾಗಿ ತನಿಖೆ ವಿಳಂಬ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಅಂತರರಾಜ್ಯ ಮಾಂಸ ದಂಧೆಯ ಶಂಕೆ: ವನ್ಯ ಪ್ರಾಣಿಗಳ ಮಾಂಸಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದ್ದು, ಇದನ್ನು ಸಂಗ್ರಹಿಸಿ ರಫ್ತು ಮಾಡುವ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿದೆ. ಈ ಪ್ರಕರಣದ ಹಿಂದೆ ವ್ಯವಸ್ಥಿತವಾದ ರಾಜ್ಯ ಮತ್ತು ಅಂತರರಾಜ್ಯ ತಂಡಗಳ ಸಂಚು ಇರುವ ಸಾಧ್ಯತೆಯನ್ನು ಇಲಾಖೆಯೇ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದೆ. ಹೀಗಿದ್ದರೂ ಆರೋಪಿಗಳಿಗೆ ಜಾಮೀನು ಸಿಕ್ಕಿರುವುದು ಈ ದಂಧೆಯನ್ನು ಮಟ್ಟಹಾಕುವ ಇಲಾಖೆಯ ಪ್ರಯತ್ನಕ್ಕೆ ಹಿನ್ನಡೆಯಾದಂತಿದೆ.
ಸದ್ಯ ಘಟನಾ ಸ್ಥಳದಲ್ಲಿ ವಶಪಡಿಸಿಕೊಂಡ ಮಾಂಸ ಮತ್ತು ರಕ್ತದ ಮಾದರಿಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಕೃತ್ಯಕ್ಕೆ ಬಳಸಿದ ಆಯುಧ ಪತ್ತೆಯಾದಲ್ಲಿ ಮಾತ್ರ ಈ ಜಾಲದ ಹಿಂದಿರುವ ಅಸಲಿ ‘ಪ್ರಭಾವಿ’ ಮುಖಗಳು ಅನಾವರಣಗೊಳ್ಳಲಿವೆ.
