ಅಂತರರಾಜ್ಯ ಮಾದಕವಸ್ತು ಜಾಲ ಪತ್ತೆ; ಪುತ್ತೂರಿನಲ್ಲಿ ಕೇರಳ ಮೂಲದ ಮೂವರು ಆರೋಪಿಗಳ ಬಂಧನ

kadaba times

 ಪುತ್ತೂರು ಗ್ರಾಮಾಂತರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ. ತಲವಾರ್ ಮತ್ತು 5.38 ಲಕ್ಷ ಮೌಲ್ಯದ MDMA ಮಾದಕವಸ್ತುವಿನೊಂದಿಗೆ ಕೇರಳದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

kadaba times
uniq

ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಅಂತರರಾಜ್ಯ ಮಾದಕವಸ್ತು ಮಾರಾಟ ಜಾಲದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಿಷೇಧಿತ MDMA ಮಾದಕವಸ್ತು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆಯ ವಿವರ: ದಿನಾಂಕ 18-02-2026 ರಂದು ಆರೋಪಿಗಳು ಪುತ್ತೂರಿನಿಂದ ಸುಳ್ಯ ಕಡೆಗೆ ಕಾರಿನಲ್ಲಿ ಮಾದಕವಸ್ತುವನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ವಾಹನವನ್ನು ತಡೆದು ಪರಿಶೀಲಿಸಿದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ.

ಬಂಧಿತ ಆರೋಪಿಗಳು ಮುಹಮ್ಮದ್ ಅಜ್ಮಲ್ ಸಿ @ ಅಜ್ಜು (30): ಕೋಝಿಕೋಡ್, ಕೇರಳ,ಇಸ್ಮಾಯಿಲ್ (28): ವಯನಾಡ್ ಜಿಲ್ಲೆ, ಕೇರಳ, ಸಂಶೀರ್ (27): ಕೋಝಿಕೋಡ್, ಕೇರಳ.

 ಪೊಲೀಸರು ಆರೋಪಿಗಳಿಂದ ಈ ಕೆಳಗಿನ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. 53.58 ಗ್ರಾಂ MDMA: ಇದರ ಅಂದಾಜು ಮಾರುಕಟ್ಟೆ ಮೌಲ್ಯ ರೂ. 5,38,800/,ಒಂದು ಕಾರು ಮತ್ತು ಮೊಬೈಲ್ ಫೋನ್‌ಗಳು,ನಗದು ರೂ. 10,000, ಸುರಕ್ಷತೆಗಾಗಿ ಇರಿಸಿಕೊಂಡಿದ್ದ ಮಾರಕಾಸ್ತ್ರ (ತಲವಾರ್).

kadaba times
kadaba times

ಹಲವು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು: ತನಿಖೆಯ ವೇಳೆ ಬಂಧಿತರು ಕೇರಳ, ಗೋವಾ ಮತ್ತು ಕರ್ನಾಟಕದಾದ್ಯಂತ ಮಾದಕವಸ್ತು ಸರಬರಾಜು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಮುಖ್ಯ ಆರೋಪಿ ಮುಹಮ್ಮದ್ ಅಜ್ಮಲ್ ಮೇಲೆ ಈಗಾಗಲೇ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಮತ್ತೊಂದು NDPS ಪ್ರಕರಣ ದಾಖಲಾಗಿತ್ತು. ಇನ್ನುಳಿದ ಆರೋಪಿಗಳ ಮೇಲೆ ಕೇರಳದ ಕೋಝಿಕೋಡು, ಕಣ್ಣೂರು ಮತ್ತು ವಯನಾಡ್ ಜಿಲ್ಲೆಗಳಲ್ಲಿ ಹಲವು ಪ್ರಕರಣಗಳಿದ್ದು, ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದರು.

ಪೊಲೀಸ್ ತಂಡದ ಕಾರ್ಯಾಚರಣೆ: ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಪ್ರಮೋದ್ ಕುಮಾರ್ ಮಾರ್ಗದರ್ಶನದಲ್ಲಿ, ಗ್ರಾಮಾಂತರ ಠಾಣಾ ಪ್ರಭಾರ ನಿರೀಕ್ಷಕ ಸುನಿಲ್ ಕುಮಾರ್, ಡಿಎಸ್‌ಬಿ ವಿಭಾಗದ ನಂದ ಕುಮಾರ್, ಉಪನಿರೀಕ್ಷಕರಾದ ಗುಣಪಾಲ ಮತ್ತು ಸುಶ್ಮಾ ಜೆ ಭಂಡಾರಿ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ವಿಶೇಷ ತಂಡದ ಸಿಬ್ಬಂದಿಗಳಾದ ಅದ್ರಾಮ, ಪ್ರಶಾಂತ್ ರೈ, ಹರ್ಷಿತ್ ಮತ್ತಿತರರು ಪಾಲ್ಗೊಂಡಿದ್ದರು.

ಸದ್ಯ ಆರೋಪಿಗಳ ವಿರುದ್ಧ NDPS ಕಾಯ್ದೆ ಮತ್ತು ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Related Articles

Latest Articles