
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕಡಬ–ಪಂಜ ಮುಖ್ಯ ರಸ್ತೆಯ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿದರು. ಈ ಯೋಜನೆಯ ವಿವರ ಇಲ್ಲಿದೆ.


ಕಡಬ: ಬಹುದಿನಗಳ ಬೇಡಿಕೆಯಾಗಿರುವ ಗುಂಡಿಗಳಿಂದಲೇ ಕೂಡಿರುವ ಕಡಬ–ಪಂಜ ಮುಖ್ಯ ರಸ್ತೆಯ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಬುಧವಾರ ಮತ್ತೆ ಗುದ್ದಲಿಪೂಜೆ ನೆರವೇರಿಸಿದ್ದಾರೆ .
ಕಡಬದ ವಿದ್ಯಾನಗರ ಬಳಿ ತೆಂಗಿನಕಾಯಿ ಒಡೆಯುವ ಮೂಲಕ ಒಂದು ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ಅವರು, “ಒಟ್ಟು 2 ಕೋಟಿ ರೂ. ಅನುದಾನದಲ್ಲಿ ಈ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ.
ಈಗಾಗಲೇ ಮೊದಲ ಹಂತದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಕಡಬ ಭಾಗದಿಂದ ಕಲ್ಲಂತಡ್ಕದವರೆಗೆ ರಸ್ತೆ ಹೆಚ್ಚು ಹಾಳಾಗಿದ್ದ ಮೂರು ಕಡೆಗಳನ್ನು ಎತ್ತರಿಸಿ ಕಾಂಕ್ರೀಟ್ ಹಾಕಲಾಗಿದೆ. ಅಲ್ಲದೆ ಕೆಲವು ಆಯ್ದ ಭಾಗಗಳಲ್ಲಿ ಡಾಮರು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ,” ಎಂದು ಮಾಹಿತಿ ನೀಡಿದರು.


ಈ ತಿಂಗಳ ಅಂತ್ಯಕ್ಕೆ ರಸ್ತೆ ಪೂರ್ಣ: ಉಳಿದ ಒಂದು ಕೋಟಿ ರೂ. ಅನುದಾನದ ಕಾಮಗಾರಿಗೆ ಇದೀಗ ಚಾಲನೆ ನೀಡಲಾಗಿದ್ದು, ಈ ತಿಂಗಳ ಕೊನೆಯೊಳಗೆ ಕಡಬದಿಂದ ಕೋಡಿಂಬಾಳದ ಓಂತ್ರಡ್ಕ ತನಕದ ರಸ್ತೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಅಲ್ಲದೆ, ಓಂತ್ರಡ್ಕದಿಂದ ಪಂಜದ ತನಕ ಲೋಕೋಪಯೋಗಿ ಇಲಾಖೆಯ ನಿರ್ವಹಣಾ ಅನುದಾನದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ ‘ಟೇಪಿಂಗ್’ ಕಾರ್ಯವನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಗೋಪಾಲ್ ಅವರು ಕಾಮಗಾರಿಯ ತಾಂತ್ರಿಕ ವಿವರಗಳ ಬಗ್ಗೆ ಪೂರಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಸುಳ್ಯ ಮಂಡಲದ ಪ್ರಮುಖರು ಪಾಲ್ಗೊಂಡಿದ್ದರು.
