
ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 1.5 ಕೋಟಿ ರೂ. ವೆಚ್ಚದ ಮಲತ್ಯಾಜ್ಯ ಮತ್ತು ತ್ಯಾಜ್ಯ ನೀರು ನಿರ್ವಹಣಾ ಘಟಕ ಸ್ಥಾಪನೆಗೆ ಜಾಗದ ಸಮಸ್ಯೆ ಎದುರಾಗಿದೆ. ಸಾರ್ವಜನಿಕರ ವಿರೋಧ ಮತ್ತು ಅರಣ್ಯ ಇಲಾಖೆ ನಿಯಮಗಳಿಂದ ಯೋಜನೆ ವಿಳಂಬವಾಗುತ್ತಿದ್ದು, ದಂಡದ ಭೀತಿ ಎದುರಾಗಿದೆ.


ಕಡಬ: ಪರಿಸರ ಸಂರಕ್ಷಣೆ ಮತ್ತು ಅಂತರ್ಜಲ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ರಾಷ್ಟ್ರೀಯ ಹಸಿರು ನ್ಯಾಯಪೀಠದ (NGT) ಮಾರ್ಗಸೂಚಿಯಂತೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬಹುನಿರೀಕ್ಷಿತ ಮಲತ್ಯಾಜ್ಯ ನಿರ್ವಹಣಾ ಘಟಕ (FSTP) ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕ (STP) ಸ್ಥಾಪನೆಗೆ ಸಂಬಂಧಿಸಿದಂತೆ ಜಾಗದ ಸಮಸ್ಯೆ ಎದುರಾಗಿದ್ದು, ಸಾರ್ವಜನಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಯೋಜನೆ ವಿಳಂಬವಾಗುವ ಭೀತಿ ಎದುರಾಗಿದೆ.
ಗ್ಲೋಬಲ್ ವಾರ್ಮಿಂಗ್ ತಡೆಗಟ್ಟಲು ಮತ್ತು ಅಂತರ್ಜಲ ಕಲುಷಿತಗೊಳ್ಳುವುದನ್ನು ತಪ್ಪಿಸಲು ಹಸಿರು ನ್ಯಾಯಪೀಠವು ದೇಶಾದ್ಯಂತ ತ್ಯಾಜ್ಯ ನೀರು ನಿರ್ವಹಣೆಯನ್ನು ಕಡ್ಡಾಯಗೊಳಿಸಿದೆ. ಇದರ ಭಾಗವಾಗಿ ಕಡಬದಲ್ಲಿ ಸುಮಾರು 1.5 ಕೋಟಿ ರೂ. ವೆಚ್ಚದ ಎಫ್.ಎಸ್.ಎಸ್.ಎಂ (FSSM) ಯೋಜನೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ. ಒಳಚರಂಡಿ ವ್ಯವಸ್ಥೆ (UGD) ಯಶಸ್ವಿಯಾಗದ ಕಡೆಗಳಲ್ಲಿ ಮನೆಗಳ ಸೆಪ್ಟಿಕ್ ಟ್ಯಾಂಕ್ ತ್ಯಾಜ್ಯವನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ಸಂಸ್ಕರಿಸುವುದು ಈ ಯೋಜನೆಯ ಮೂಲ ಉದ್ದೇಶ.
ದೇವನಹಳ್ಳಿಯ ಮಾದರಿಯಲ್ಲಿ ಈ ಯೋಜನೆಯನ್ನು ಕಡಬದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಈಗಾಗಲೇ ಸ್ಥಳ ಗುರುತಿಸಿ ಕಾಮಗಾರಿ ಆರಂಭಿಸಲಾಗಿದೆ. ಆದರೆ, ಜನವಸತಿ ಪ್ರದೇಶದ ಸಮೀಪವೇ ಈ ಘಟಕ ಸ್ಥಾಪನೆಯಾಗುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಮಾಹಿತಿ ನೀಡುವಲ್ಲಿ ಪಂಚಾಯತ್ ವಿಫಲ, ಸಾರ್ವಜನಿಕರ ಆಕ್ರೋಶ: ಈ ಯೋಜನೆಯು ಎರಡು ವರ್ಷಗಳ ಹಿಂದೆಯೇ ಘೋಷಣೆಯಾಗಿದ್ದರೂ, ವಾರ್ಡು ನಿವಾಸಿಗಳಿಗೆ ಮತ್ತು ಸಾರ್ವಜನಿಕರಿಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡುವಲ್ಲಿ ಪಟ್ಟಣ ಪಂಚಾಯತ್ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ. ಯೋಜನೆಯ ಸ್ವರೂಪ, ಅದರ ವೈಜ್ಞಾನಿಕತೆ ಮತ್ತು ಜನವಸತಿ ಪ್ರದೇಶದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಮೊದಲೇ ಸಮರ್ಪಕ ಮಾಹಿತಿ ನೀಡಿದ್ದರೆ ಇಷ್ಟೊಂದು ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗುತ್ತಿರಲಿಲ್ಲ ಎಂಬುದು ಸಾರ್ವಜನಿಕರ ವಾದವಾಗಿದೆ. ಅಲ್ಲದೆ, ಇಂಜಿನಿಯರ್ ಅವರು ಕಾಮಗಾರಿ ಆರಂಭವಾದ ಬಳಿಕ ತಡವಾಗಿ ಮಾಧ್ಯಮಗಳ ಮುಂದೆ ಮಾಹಿತಿ ನೀಡಿರುವುದು ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅರಣ್ಯ ಇಲಾಖೆ ಮತ್ತು ಸ್ಥಳೀಯರ ಆಕ್ಷೇಪ: ಆರಂಭದಲ್ಲಿ ಸರ್ವೆ ನಂಬರ್ 198/2ರಲ್ಲಿ ಜಾಗ ಗುರುತಿಸಲಾಗಿತ್ತಾದರೂ, ಅಲ್ಲಿ ಸುಮಾರು 236 ಬೆಲೆಬಾಳುವ ಮರಗಳಿದ್ದ ಕಾರಣ ಅರಣ್ಯ ಇಲಾಖೆ ಅನುಮತಿ ನಿರಾಕರಿಸಿತ್ತು. ತದನಂತರ ಕಳಾರದಲ್ಲಿ (ಸರ್ವೆ ನಂ. 30/1) ಕಾಮಗಾರಿ ಆರಂಭಿಸಲು ಮುಂದಾದಾಗ, ಸ್ಥಳೀಯ ಸುಮಾರು 172 ನಿವಾಸಿಗಳು ಒಟ್ಟಾಗಿ ಸೇರಿ ಪರಿಸರಕ್ಕೆ ತೊಂದರೆಯಾಗುತ್ತದೆ ಎಂದು ಆಕ್ಷೇಪಿಸಿ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ.


ದಂಡದ ಭೀತಿ ಮತ್ತು ತುರ್ತು ಸಭೆ: ಯೋಜನೆಯು ಈಗಾಗಲೇ ಎರಡು ವರ್ಷ ವಿಳಂಬವಾಗಿದ್ದು, ಮಾರ್ಚ್ ತಿಂಗಳೊಳಗೆ ಕೆಲಸ ಆರಂಭಿಸದಿದ್ದರೆ ಪಂಚಾಯತ್ಗೆ ದೊಡ್ಡ ಮೊತ್ತದ ದಂಡ (Fine) ವಿಧಿಸುವ ಎಚ್ಚರಿಕೆಯನ್ನು ಸರ್ಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅವರು ಕೋಡಿಂಬಾಳದಲ್ಲಿ ಪರ್ಯಾಯ ಜಾಗವನ್ನು ಸೂಚಿಸಿದ್ದು, ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ . ಇಂದು ಬೆಳಿಗ್ಗೆ 11 ಗಂಟೆಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಉಪಸ್ಥಿತಿಯಲ್ಲಿ ತುರ್ತು ಸಭೆ ಕರೆಯಲಾಗಿದ್ದು, ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ನಾಯಿ ಸಾಕಣೆ ಕೇಂದ್ರಕ್ಕೂ ವಿರೋಧ:ಇನ್ನೊಂದೆಡೆ, ಕೋಡಿಂಬಾಳದಲ್ಲಿ ಮಡ್ಯಡ್ಕ ಎಂಬಲ್ಲಿ ಬೀದಿ ನಾಯಿಗಳ ಪುನರ್ವಸತಿ ಕೇಂದ್ರಕ್ಕಾಗಿ ಜಾಗ ಗುರುತಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಮಾತನಾಡಿದ ಸ್ಥಳೀಯ ಮುಖಂಡರು, “ಕೋಡಿಂಬಾಳ ಪ್ರದೇಶ ಒಂದು ವೇಗವಾಗಿ ಬೆಳೆಯುತ್ತಿರುವ ಪಟ್ಟಣ ಪ್ರದೇಶ. ಇಲ್ಲಿ ಈಗಾಗಲೇ ಸಾರ್ವಜನಿಕ ಉದ್ದೇಶಕ್ಕಾಗಿ 4.30 ಎಕರೆ ಜಾಗ ಮೀಸಲಿರಿಸಲಾಗಿದ್ದು, ಸಭಾಭವನವನ್ನೂ ನಿರ್ಮಿಸಲಾಗಿದೆ. ಇಂತಹ ಜನನಿಬಿಡ ಪ್ರದೇಶದಲ್ಲಿ ನಾಯಿ ಸಾಕಣೆ ಕೇಂದ್ರ ತೆರೆಯುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದ್ದಾರೆ.
ಅಧಿಕಾರಿಗಳ ಸ್ಪಷ್ಟನೆ: ಈ ಕುರಿತು ಮಾಹಿತಿ ನೀಡಿರುವ ಪ.ಪಂ ಮುಖ್ಯಾಧಿಕಾರಿ ಮತ್ತು ಇಂಜಿನಿಯರ್ ಅಧಿಕಾರಿಗಳು, “ಈ ಘಟಕವು ಸಂಪೂರ್ಣ ವೈಜ್ಞಾನಿಕವಾಗಿದ್ದು, ಜನವಸತಿ ಪ್ರದೇಶಕ್ಕೆ ಯಾವುದೇ ತೊಂದರೆ ನೀಡುವುದಿಲ್ಲ. ಇಲ್ಲಿ ಮಲತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಯೋಜನೆ ಅನುಷ್ಠಾನವಾಗದಿದ್ದರೆ ಪಟ್ಟಣಕ್ಕೆ ಬರುವ ಅನುದಾನಗಳು ಸ್ಥಗಿತಗೊಳ್ಳುವ ಅಪಾಯವಿದೆ” ಎಂದು ತಿಳಿಸಿದ್ದಾರೆ.
ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಆತುರದಲ್ಲಿ ಯೋಜನೆ ಜಾರಿಗೆ ತರಲು ಮುಂದಾದ ಪಂಚಾಯತ್ ನಡೆ ಈಗ ಪೇಚಿಗೆ ಸಿಲುಕುವಂತೆ ಮಾಡಿದೆ.
