
ಕಲ್ಲುಗುಡ್ಡೆಯಲ್ಲಿ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ವ್ಯಾಪಾರಿಯೊಬ್ಬರಿಗೆ ಮಾರಕಾಯುಧಗಳಿಂದ ಬೆದರಿಕೆ ಹಾಕಿದ ಆರೋಪದ ಮೇಲೆ ನ್ಯಾಯಾಲಯದ ಆದೇಶದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ


ಕಡಬ: ಜಾಗವೊಂದರಲ್ಲಿ ಗಿಡಗಳನ್ನು ತೆಗೆಯುತ್ತಿದ್ದ ವೇಳೆ ಮಾರಕಾಯುಧಗಳೊಂದಿಗೆ ಅಕ್ರಮವಾಗಿ ಪ್ರವೇಶಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನಿವಾಸಿ ಲಿಂಗಪ್ಪ ಗೌಡ (57) ಅವರು ಕಲ್ಲುಗುಡ್ಡೆ ಎಂಬಲ್ಲಿ ಹಾರ್ಡ್ವೇರ್ ಅಂಗಡಿ ನಡೆಸುತ್ತಿದ್ದಾರೆ. ಇವರು ಶೌಕತ್ ಎಂಬವರಿಂದ ಕ್ರಯಚೀಟು ಮೂಲಕ ಸುಮಾರು 8 ಸೆಂಟ್ಸ್ ಜಾಗವನ್ನು ಪಡೆದುಕೊಂಡಿದ್ದರು. ಕಳೆದ ನವೆಂಬರ್ 10, 2025 ರಂದು ಲಿಂಗಪ್ಪ ಗೌಡರು ಸದರಿ ಜಾಗದಲ್ಲಿ ಬೆಳೆದಿದ್ದ ಕಳೆ ಗಿಡಗಳನ್ನು ತೆಗೆಯುತ್ತಿದ್ದಾಗ, ಶೌಕತ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಮಾರಕಾಯುಧಗಳೊಂದಿಗೆ ಅಲ್ಲಿಗೆ ಆಗಮಿಸಿದ್ದಾರೆ ಎಂದು ಆರೋಪಿಸಲಾಗಿದೆ.


ಆರೋಪಿಗಳು ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ, ಕೆಲಸಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಪೈಕಿ ಓರ್ವ “ಜಾಗಕ್ಕೆ ಕಾಲಿಟ್ಟರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ನ್ಯಾಯಾಲಯದ ಮೊರೆ ಹೋದ ದೂರುದಾರ: ಈ ಬಗ್ಗೆ ಆರಂಭದಲ್ಲಿ ಕಡಬ ಪೊಲೀಸ್ ಠಾಣೆಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ದೂರುದಾರರು ಪುತ್ತೂರಿನ ನ್ಯಾಯಾಲಯದಲ್ಲಿ ಖಾಸಗಿ ಫಿರ್ಯಾದು ದಾಖಲಿಸಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಈಗ ಕಡಬ ಠಾಣೆಯಲ್ಲಿ ಮೂವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 126, 129, 130, 131 ಹಾಗೂ 351 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
