
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಕಾರ್ಮಿಕ ಸಂಘಟನೆಗಳಿಂದ ವಾಹನ ಜಾಥಾ. ಫೆಬ್ರವರಿ 12 ರಂದು ನಡೆಯಲಿರುವ ಅಖಿಲ ಭಾರತ ಮಹಾಮುಷ್ಕರಕ್ಕೆ ಬೆಂಬಲ ಕೋರಿ ಕಡಬದಲ್ಲಿ ಜಾಗೃತಿ.


ಕಡಬ: ಕೇಂದ್ರ ಸರ್ಕಾರವು ಚಾಲ್ತಿಯಲ್ಲಿರುವ 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ, ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುತ್ತಿರುವುದು ಕಾರ್ಮಿಕ ವರ್ಗದ ಪಾಲಿಗೆ ಮರಣಶಾಸನವಾಗಿ ಪರಿಣಮಿಸಲಿದೆ ಎಂದು ಸಿಐಟಿಯು (CITU) ಮುಖಂಡ ಬಿ.ಎಂ ಭಟ್ ಎಚ್ಚರಿಸಿದ್ದಾರೆ.
ಕೇಂದ್ರ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಮತ್ತು ಸಂಯುಕ್ತ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಫೆಬ್ರವರಿ 12 ರಂದು ನಡೆಯಲಿರುವ ಅಖಿಲ ಭಾರತ ಮಹಾಮುಷ್ಕರದ ಹಿನ್ನೆಲೆಯಲ್ಲಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾದ ಮೂರು ದಿನಗಳ ಜಿಲ್ಲಾ ಮಟ್ಟದ ವಾಹನ ಪ್ರಚಾರ ಜಾಥಾವು ಶುಕ್ರವಾರ (ಫೆ.6) ಕಡಬ ತಲುಪಿತು. ಈ ಸಂದರ್ಭದಲ್ಲಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಜಾಥಾವನ್ನುದ್ದೇಶಿಸಿ ಮಾತನಾಡಿದ ಬಿ.ಎಂ ಭಟ್, “ಹಲವು ದಶಕಗಳ ಹೋರಾಟದ ಫಲವಾಗಿ ಬಂದಿದ್ದ 29 ಕಾನೂನುಗಳನ್ನು ಕಿತ್ತೆಸೆದು ಕಾರ್ಪೊರೇಟ್ ಸಂಸ್ಥೆಗಳ ಹಿತಾಸಕ್ತಿಗಾಗಿ ನಾಲ್ಕು ಸಂಹಿತೆಗಳನ್ನು ರೂಪಿಸಲಾಗುತ್ತಿದೆ. ಇದು ಕಾರ್ಮಿಕರ ಭದ್ರತೆ, ವೇತನ ಮತ್ತು ಹಕ್ಕುಗಳನ್ನು ಹತ್ತಿಕ್ಕುವ ಕೆಲಸವಾಗಿದೆ. ಇದರ ವಿರುದ್ಧ ಜನಸಾಮಾನ್ಯರು ಮತ್ತು ಕಾರ್ಮಿಕರು ಒಗ್ಗೂಡಿ ಹೋರಾಡಬೇಕಿದೆ” ಎಂದರು.


ಫೆಬ್ರವರಿ 5 ರಂದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆ ಬಳಿ ಚಾಲನೆ ನೀಡಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಚರಿಸಿ ಕಾರ್ಮಿಕರಿಗೆ ಮುಷ್ಕರದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.ಫೆಬ್ರವರಿ 7 ರಂದು ಸಂಜೆ ಮಂಗಳೂರು ನಗರದ ಯೆಯ್ಯಾಡಿ ಜಂಕ್ಷನ್ನಲ್ಲಿ ಜಾಥಾ ಮುಕ್ತಾಯಗೊಳ್ಳಲಿದೆ.
ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡುವಂತೆ ಒತ್ತಾಯಿಸಿ ದೇಶಾದ್ಯಂತ ಫೆಬ್ರವರಿ 12 ರಂದು ಬೃಹತ್ ಮುಷ್ಕರ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.
ಜಾಥಾದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.
