ಐತ್ತೂರು ಕಾಡುಕೋಣ ಬೇಟೆ ಪ್ರಕರಣ: ಓರ್ವನನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ

ಅಂತರ್ರಾಜ್ಯ ಜಾಲದ ಶಂಕೆ, ತನಿಖೆ ಚುರುಕು

kadaba times

ಐತ್ತೂರಿನಲ್ಲಿ ನಡೆದ ಬೃಹತ್ ಕಾಡುಕೋಣ ಬೇಟೆ ಪ್ರಕರಣದಲ್ಲಿ ಅರಣ್ಯ ಇಲಾಖೆ ತನಿಖೆ ಚುರುಕುಗೊಳಿಸಿದೆ. ರಾಜಕೀಯ ಒತ್ತಡ ಹಾಗೂ ಅಂತರ್ರಾಜ್ಯ ಮಾಂಸ ಸಾಗಾಟದ ಜಾಲದ ಬಗ್ಗೆ ದಟ್ಟ ಅನುಮಾನ ಮೂಡಿದೆ.

kadaba times
uniq

ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಬೃಹತ್ ಕಾಡುಕೋಣ ಬೇಟೆ ಪ್ರಕರಣ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ.  ಪ್ರಕರಣ ನಡೆದು ಹಲವು ದಿನಗಳಾದರೂ ಅಸಲಿ ಆರೋಪಿಗಳು ಇನ್ನೂ ಕಟಕಟೆಗೆ ಏರದೇ ಇರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ತಾಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾದಾಗ, ಪಂಜ ವಲಯ ಅರಣ್ಯಾಧಿಕಾರಿ ಸಂಧ್ಯಾ ಅವರು ಉತ್ತರಿಸಿ, “ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಮತ್ತು ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.

ನಂಬಲಾರ್ಹ ಮೂಲಗಳ ಪ್ರಕಾರ, ಅರಣ್ಯ ಇಲಾಖೆಯು ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ವಿಶೇಷವಾಗಿ ಎರಡು ದಿನಗಳ ಹಿಂದೆ ಓರ್ವ ವ್ಯಕ್ತಿಯನ್ನು ಸುಬ್ರಹ್ಮಣ್ಯ ಸಮೀಪದ ಕೊಲ್ಲಮೊಗ್ರ ಐಬಿ (ನಿರೀಕ್ಷಣಾ ಮಂದಿರ) ದಲ್ಲಿ ಸುದೀರ್ಘ ವಿಚಾರಣೆಗೆ ಒಳಪಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಆರೋಪಿಯ ಹೆಸರನ್ನು ಬಹಿರಂಗ ಪಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ನಿರಾಕರಿಸಿದ್ದಾರೆ. ಘಟನೆ ನಡೆದ ದಿನ ಐತ್ತೂರು ಭಾಗದಲ್ಲಿ ಸಂಚರಿಸಿದ ಅನುಮಾನಾಸ್ಪದ ವಾಹನದ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.

ಅಂತರಾಜ್ಯ ಮಾಂಸ ಸಾಗಾಟ ಜಾಲ?:  ಈ ಬೇಟೆಯ ಹಿಂದೆ ಕೇವಲ ಸ್ಥಳೀಯ ಹವ್ಯಾಸಿ ಬೇಟೆಗಾರರಲ್ಲದೆ, ಪ್ರಭಾವಿ ವ್ಯಕ್ತಿಗಳನ್ನೊಳಗೊಂಡ ದೊಡ್ಡ ಜಾಲವೇ ಇರುವ ಶಂಕೆ ವ್ಯಕ್ತವಾಗಿದೆ.  ಬೇಟೆಯಾಡಿದ ಮಾಂಸವನ್ನು ಹೊರ ರಾಜ್ಯಗಳಿಗೆ ಸಾಗಿಸಲು ಯೋಜನೆ ರೂಪಿಸಲಾಗಿತ್ತು ಎಂಬ ಸುದ್ದಿಗಳು ಕೇಳಿಬರುತ್ತಿವೆ. ಬೃಹತ್ ಗಾತ್ರದ ಕಾಡುಕೋಣವನ್ನು ಹೊಡೆದು ಉರುಳಿಸುವುದು ಮತ್ತು ಅಷ್ಟು ಮಾಂಸವನ್ನು ವಿಲೇವಾರಿ ಮಾಡುವುದು ವೃತ್ತಿಪರ ತಂಡದಿಂದ ಮಾತ್ರ ಸಾಧ್ಯ ಎಂಬುದು ತಜ್ಞರ ಅಭಿಪ್ರಾಯ.

kadaba times
kadaba times

ರಾಜಕೀಯ ಒತ್ತಡ ಮತ್ತು ಸಾರ್ಬಜನಿಕರ ಆಕ್ರೋಶ:   ಪ್ರಕರಣದ ತನಿಖೆಯನ್ನು ಹಳ್ಳ ಹಿಡಿಸಲು ಅಥವಾ ದಿಕ್ಕು ತಪ್ಪಿಸಲು ಕೆಲವು ರಾಜಕೀಯ ಪ್ರಭಾವಿ ವ್ಯಕ್ತಿಗಳು ತೆರೆಯ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾತುಗಳು ಐತ್ತೂರು ಪರಿಸರದಲ್ಲಿ ಕೇಳಿಬರುತ್ತಿವೆ. “ಹಿಂದೆ ನಡೆದ ಇಂತಹ ಪ್ರಕರಣಗಳಲ್ಲೂ ಆರೋಪಿಗಳಿಗೆ ಸರಿಯಾದ ಶಿಕ್ಷೆಯಾಗಿಲ್ಲ, ಈ ಬಾರಿಯೂ ಇಲಾಖೆ ಮೃದು ಧೋರಣೆ ತಾಳುತ್ತಿದೆಯೇ?” ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಕಾನೂನು ಏನು ಹೇಳುತ್ತದೆ? (ವನ್ಯಜೀವಿ ಸಂರಕ್ಷಣಾ ಕಾಯ್ದೆ 1972)

ಕಾಡುಕೋಣವು ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸೂಚಿ-1 (Schedule I) ಅಡಿಯಲ್ಲಿ ರಕ್ಷಿಸಲ್ಪಟ್ಟ ಪ್ರಾಣಿಯಾಗಿದೆ. ಇದರ ಬೇಟೆ ಅತ್ಯಂತ ಗಂಭೀರ ಅಪರಾಧವಾಗಿದೆ. ಜೈಲು ಶಿಕ್ಷೆ: ಈ ಕಾಯ್ದೆಯಡಿ ಅಪರಾಧ ಸಾಬೀತಾದರೆ ಕನಿಷ್ಠ 3 ರಿಂದ 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಕನಿಷ್ಠ 25,000 ರೂ.ಗಳಿಂದ ಲಕ್ಷಾಂತರ ರೂಪಾಯಿಗಳವರೆಗೆ ದಂಡ ವಿಧಿಸಬಹುದು.  ಇದು  ಜಾಮೀನು ರಹಿತ (Non-bailable) ಅಪರಾಧವಾಗಿದ್ದು, ತನಿಖಾಧಿಕಾರಿಗಳು ಭದ್ರ ಪುರಾವೆ ಒದಗಿಸಿದಲ್ಲಿ ಆರೋಪಿಗಳು ದೀರ್ಘಕಾಲ ಜೈಲಿನಲ್ಲಿ ಇರಬೇಕಾಗುತ್ತದೆ.

ವನ್ಯಜೀವಿಗಳ ಸಂರಕ್ಷಣೆ ಕೇವಲ ಇಲಾಖೆಯ ಜವಾಬ್ದಾರಿಯಲ್ಲ, ಅದು ಸಮಾಜದ ಕರ್ತವ್ಯವೂ ಹೌದು. ಐತ್ತೂರು ಪ್ರಕರಣದಲ್ಲಿ ಅರಣ್ಯ ಇಲಾಖೆಯು ನೈಜ ಅಪರಾಧಿಗಳನ್ನು ಪತ್ತೆ ಹಚ್ಚಿ, ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಶಿಕ್ಷೆ ಕೊಡಿಸುವ ಮೂಲಕ ಇಲಾಖೆಯ ಮೇಲಿರುವ ವಿಶ್ವಾಸವನ್ನು ಉಳಿಸಿಕೊಳ್ಳಬೇಕಿದೆ.

Related Articles

Latest Articles