ಕಡಬ: ಶೂಟೌಟ್ ಪ್ರಕರಣಕ್ಕೆ ಹೊಸ ತಿರುವು: ಮಗನ ಸಾವು ಕೊಲೆಯೋ? ಆತ್ಮಹತ್ಯೆಯೋ?

ಆಸ್ತಿ ವಿವಾದ ಹಿನ್ನೆಲೆ; ತಂದೆಯೇ ಮಗನನ್ನು ಕೊಂದಿದ್ದಾರೆ ಎಂದು ತಾಯಿ ದೂರು

kadaba times

ಪ್ರಾಥಮಿಕ ಮಾಹಿತಿಯಂತೆ ತಂದೆ-ಮಗನ ನಡುವಿನ ಕಲಹವೇ ಕಾರಣ ಎನ್ನಲಾಗಿದ್ದರೂ, ತಾಯಿ ಈಗ ಕೊಲೆ ದೂರು ನೀಡಿದ್ದಾರೆ. ಪೊಲೀಸರು ತಂದೆಯ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ.  ಎರಡೂ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿ ಪೊಲೀಸರು  ಸತ್ಯಾಸತ್ಯತೆ  ಹೊರಹಾಕಬೇಕಿದೆ.

kadaba times
uniq

ಕಡಬ: ತಾಲೂಕಿನ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಜ. 24ರಂದು ಸಂಜೆ ನಡೆದ 17 ವರ್ಷದ ಬಾಲಕನ ಸಾವಿನ ಪ್ರಕರಣ ಈಗ ರಹಸ್ಯಮಯ ತಿರುವು ಪಡೆದುಕೊಂಡಿದೆ. ಮೊದಲು ಮಗನೇ ತಂದೆಗೆ ಇರಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ವರದಿಗಳು ಬಂದಿತ್ತಾದರೂ, ಇದೀಗ ತಾಯಿ ಜಯಶ್ರೀ ಅವರು ತನ್ನ ಪತಿಯೇ ಮಗನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆಯ ಹಿನ್ನೆಲೆ:ರಾಮಕುಂಜದ ಪಾದೆ ನಿವಾಸಿ ವಸಂತ ಅಮೀನ್ ಹಾಗೂ ಜಯಶ್ರೀ ದಂಪತಿಯ ಪುತ್ರ ಮೋಕ್ಷ್ (17) ಮೃತ ಬಾಲಕ. ಶನಿವಾರ ಸಂಜೆ ವಸಂತ ಅಮೀನ್ ಅವರು ತಮ್ಮ ಪರಿಚಯಸ್ಥರಿಗೆ ಕರೆ ಮಾಡಿ, ಮಗ ಮೋಕ್ಷ್ ತನಗೆ ಚೂರಿಯಿಂದ ಇರಿದು ನಂತರ ತಾನು ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ವಸಂತ ಅಮೀನ್ ಸದ್ಯ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎ.ಬಿ. ಪದ್ಮನಾಭ ಶೆಟ್ಟಿ ಅವರ ದೂರಿನ ಸಾರಾಂಶ:ಪ್ರಕರಣದ ಮೊದಲ ಪಿರ್ಯಾದಿದಾರರಾದ ಎ.ಬಿ. ಪದ್ಮನಾಭ ಶೆಟ್ಟಿ (48 ವರ್ಷ, ಕೊಯಿಲ ಗ್ರಾಮದ ನಡುಬಡಿಲ ನಿವಾಸಿ) ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಘಟನೆಯನ್ನು ಈ ರೀತಿ ವಿವರಿಸಿದ್ದಾರೆ. ಜ. 24ರಂದು ಸಂಜೆ 4:36 ಗಂಟೆಗೆ ವಸಂತ ಅಮೀನ್ ಅವರು ಪದ್ಮನಾಭ ಶೆಟ್ಟಿಯವರಿಗೆ ಕರೆ ಮಾಡಿ, “ನನಗೆ ಮಗ ಮೋಕ್ಷ ಚೂರಿಯಿಂದ ಇರಿದು ನಾನು ಗಾಯಗೊಂಡಿದ್ದೇನೆ” ಎಂದು ತಿಳಿಸಿದ್ದರು. ತಕ್ಷಣವೇ ಪದ್ಮನಾಭ ಶೆಟ್ಟಿ ಅವರು ಅಜೀಜ್ ಬಿ.ಕೆ ಅವರೊಂದಿಗೆ KA21 N 5622 ಸಂಖ್ಯೆಯ ಕಾರಿನಲ್ಲಿ ಸ್ಥಳಕ್ಕೆ ಧಾವಿಸಿದರು. ಈ ವೇಳೆ ಕೊಟ್ಟಿಗೆಯಲ್ಲಿ ಮಗ ಮೋಕ್ಷನ ಮೃತದೇಹ ರಕ್ತಸಿಕ್ತವಾಗಿ ಬಿದ್ದಿದ್ದು, ಎರಡು ಕಾಲುಗಳ ಮಧ್ಯೆ ಕೋವಿ ಪತ್ತೆಯಾಗಿತ್ತು.

ತಾಯಿಯ ಗಂಭೀರ ಆರೋಪ:ಘಟನಾ ಸ್ಥಳಕ್ಕೆ ಆಗಮಿಸಿದ ತಾಯಿ ಜಯಶ್ರೀ ಹಾಗೂ ಅವರ ಸಹೋದರರು ವಸಂತ ಅಮೀನ್ ಅವರ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿರುವ ಜಯಶ್ರೀ, “ನನ್ನ ಹೆಸರಿನಲ್ಲಿರುವ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಪತಿ ಒತ್ತಾಯಿಸುತ್ತಿದ್ದರು. ಮಗ ಇದಕ್ಕೆ ಅಡ್ಡಿಯಾಗಿದ್ದರಿಂದ ಆತನನ್ನು ಕೊಲೆ ಮಾಡಲಾಗಿದೆ. ಘಟನೆಗೂ ಮುನ್ನ ಮಗ ನನಗೆ ಕರೆ ಮಾಡಿ, ಅಪ್ಪನಿಂದ ತನಗೆ ಪ್ರಾಣಾಪಾಯ ಇರುವುದಾಗಿ ತಿಳಿಸಿದ್ದ” ಎಂದು ಆರೋಪಿಸಿದ್ದಾರೆ. ಅಲ್ಲದೆ, ಪತಿ ವಸಂತ ಅಮೀನ್ ಅವರೇ ಮಗನನ್ನು ಕೊಂದು, ತಮಗೆ ತಾವೇ ಚೂರಿಯಿಂದ ಇರಿದುಕೊಂಡು ನಾಟಕವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

kadaba times
kadaba times

ಪೊಲೀಸ್ ಕಾರ್ಯಾಚರಣೆ:ವಿಷಯ ತಿಳಿಯುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ, ಉಪ್ಪಿನಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗರಾಜ್ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಎಫ್‌ಎಸ್‌ಎಲ್ (FSL) ತಜ್ಞರ ತಂಡವೂ ಸ್ಥಳದಿಂದ ಮಾಹಿತಿ ಕಲೆಹಾಕಿದೆ.

ಎರಡೂ ಆಯಾಮದಲ್ಲಿ ತನಿಖೆ: ಸುದ್ದಿಗಾರರೊಂದಿಗೆ ಮಾತನಾಡಿದ ಎಎಸ್‌ಪಿ ಅನಿಲ್ ಕುಮಾರ್ ಅವರು, “ಪ್ರಾಥಮಿಕ ಮಾಹಿತಿಯಂತೆ ತಂದೆ-ಮಗನ ನಡುವಿನ ಕಲಹವೇ ಕಾರಣ ಎನ್ನಲಾಗಿದ್ದರೂ, ತಾಯಿ ಈಗ ಕೊಲೆ ದೂರು ನೀಡಿದ್ದಾರೆ. ನಾವು ತಂದೆಯ ಹೇಳಿಕೆಯನ್ನೂ ದಾಖಲಿಸಿಕೊಳ್ಳುತ್ತೇವೆ. ಎರಡೂ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರಹಾಕಲಾಗುವುದು” ಎಂದು ತಿಳಿಸಿದ್ದಾರೆ.

ಪ್ರಸ್ತುತ ಕಡಬ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

Related Articles

Latest Articles