
ದಕ್ಷಿಣ ಕನ್ನಡದ ನೆಲ್ಯಾಡಿ ಸಮೀಪದ ಉದನೆಯಲ್ಲಿ ಕಾಡಾನೆ ದಾಳಿ ನಡೆಸಿದೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಆನೆ ಕಾಣಿಸಿಕೊಂಡು ಸಂಚಾರ ವ್ಯತ್ಯಯಗೊಂಡಿದ್ದಲ್ಲದೆ, ರಾತ್ರಿ ವೇಳೆ ರೈತರ ನೂರಾರು ಬಾಳೆ, ಅಡಿಕೆ ಮತ್ತು ತೆಂಗಿನ ಮರಗಳನ್ನು ನಾಶಪಡಿಸಿದೆ


ನೆಲ್ಯಾಡಿ/ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ನೆಲ್ಯಾಡಿ ಸುತ್ತಮುತ್ತಲಿನ ಜನರಿಗೆ ಈಗ ‘ಗಜ’ಭಯವೋ ಅಥವಾ ‘ಚಿರತೆ’ ಕಾಟವೋ ಎನ್ನುವಂತಾಗಿದೆ. ಸೋಮವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 75ರ ಉದನೆ ನರ್ಸರಿ ಬಳಿ ಬೃಹತ್ ಕಾಡಾನೆಯೊಂದು ಪ್ರತ್ಯಕ್ಷವಾಗಿದ್ದು, ಪ್ರಯಾಣಿಕರು ಹಾಗೂ ಸ್ಥಳೀಯರ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಸಂಜೆ ಸುಮಾರು 5:30ರ ಸುಮಾರಿಗೆ ಹೆದ್ದಾರಿಯ ತೀರಾ ಸಮೀಪದಲ್ಲೇ ಆನೆ ಕಾಣಿಸಿಕೊಂಡಿದ್ದರಿಂದ ವಾಹನ ಸವಾರರು ಆತಂಕಕ್ಕೊಳಗಾದರು. ರಸ್ತೆಯಲ್ಲೇ ಆನೆ ಬೀಡುಬಿಟ್ಟಿದ್ದರಿಂದ ವಾಹನಗಳನ್ನು ಅಲ್ಲಲ್ಲೇ ನಿಲ್ಲಿಸಲಾಯಿತು. ಅರಣ್ಯದಂಚಿನ ಈ ಭಾಗದಲ್ಲಿ ಹಠಾತ್ತನೆ ಆನೆ ಬಂದಿದ್ದನ್ನು ಕಂಡ ಸವಾರರು ಭಯದಿಂದಲೇ ದೃಶ್ಯಗಳನ್ನು ವೀಕ್ಷಿಸಿದರು.
ಹೆದ್ದಾರಿಯಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಈ ಕಾಡಾನೆ ರಾತ್ರಿ ಸಮಯದಲ್ಲಿ ಸಮೀಪದ ಕೃಷಿ ತೋಟಗಳಿಗೆ ನುಗ್ಗಿ ತನ್ನ ಅಟ್ಟಹಾಸ ಮೆರೆದಿದೆ. ಸತ್ಯನಾರಾಯಣ ಭಟ್ (ಎಂಜಿರ ಬೂಡು): ಇವರ ತೋಟಕ್ಕೆ ನುಗ್ಗಿದ ಆನೆ ಸುಮಾರು 50ಕ್ಕೂ ಹೆಚ್ಚು ಬಾಳೆಗಿಡ ಹಾಗೂ 10ಕ್ಕೂ ಅಧಿಕ ಅಡಿಕೆ ಗಿಡಗಳನ್ನು ಸಂಪೂರ್ಣವಾಗಿ ನಾಶಪಡಿಸಿದೆ. ಕಿಟ್ಟಣ್ಣ ಶೆಟ್ಟಿ: ಇವರ ತೋಟದಲ್ಲೂ ದಾಂಧಲೆ ನಡೆಸಿರುವ ಆನೆ, 50 ಬಾಳೆಗಿಡಗಳು, ಫಲ ನೀಡುತ್ತಿದ್ದ ತೆಂಗಿನ ಮರ ಮತ್ತು 20ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಧ್ವಂಸಗೊಳಿಸಿ ರೈತರಿಗೆ ಬರಸಿಡಿಲು ಬಡಿದಂತಾಗಿದೆ.


ಉದನೆಯಲ್ಲಿ ಕಾಣಿಸಿಕೊಂಡ ಕಾಡಾನೆ ಕಡ್ಯ ಕೊಣಾಜೆ ಮೂಲಕ ಐತ್ತೂರು ಗ್ರಾಮದತ್ತ ಬಂದಿರುವುದಾಗಿ ಗ್ರಾಮದ ನಿವಾಸಿಗಳು ಮಾಹಿತಿ ನೀಡಿದ್ದಾರೆ.ಆದರೆ ಇಲಾಖೆ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ
ಸ್ಥಳಕ್ಕೆ ಉಪ್ಪಿನಂಗಡಿ ಉಪ ವಲಯಾರಣ್ಯಾಧಿಕಾರಿ ಯತೀಂದ್ರ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಷ್ಟದ ಅಂದಾಜು ಪಟ್ಟಿ ಸಿದ್ಧಪಡಿಸಿರುವ ಅಧಿಕಾರಿಗಳು, ಸರಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಆದರೆ ನಿರಂತರವಾಗಿ ನಡೆಯುತ್ತಿರುವ ಆನೆ ಹಾಗೂ ಚಿರತೆ ದಾಳಿಯಿಂದ ಸ್ಥಳೀಯರು ರಾತ್ರಿ ಹೊತ್ತು ಮನೆ ಬಿಟ್ಟು ಹೊರಬರಲು ಭಯ ಪಡುತ್ತಿದ್ದಾರೆ
