
ಕಡಬದ ಉದ್ಯಮಿ ಮತ್ತು ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸಮಿತಿ ಸದಸ್ಯ ಅಶೋಕ್ ಕುಮಾರ್ ರೈ ವಜ್ರಪಾಣಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಸಮಾಜಮುಖಿ ಕಾರ್ಯಗಳ ಕುರಿತಾದ ವಿವರ ಇಲ್ಲಿದೆ


ಕಡಬ: ಕಡಬ ಪರಿಸರದ ಜನಪ್ರಿಯ ಉದ್ಯಮಿ ಹಾಗೂ ಹಲವಾರು ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಅಶೋಕ್ ಕುಮಾರ್ ರೈ ವಜ್ರಪಾಣಿ ಅವರು ಜನವರಿ 19ರಂದು ಹೃದಯಾಘಾತದಿಂದ ನಿಧನರಾದರು.
ಕಡಬದ ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಇವರ ಅಕಾಲಿಕ ಸಾವು ಇಡೀ ತಾಲೂಕಿನ ಜನತೆಯಲ್ಲಿ ಅತೀವ ನೋವುಂಟು ಮಾಡಿದೆ.ಇಂದು ಬೆಳಿಗ್ಗೆ ತಮ್ಮ ಮನೆಯಲ್ಲಿದ್ದ ಸಂದರ್ಭದಲ್ಲಿ ಅಶೋಕ್ ಕುಮಾರ್ ರೈ ಅವರು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು.
ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಕಡಬದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಕಡಬದ ವರ್ತಕರು ಹಾಗೂ ಸಾರ್ವಜನಿಕರು ಆಸ್ಪತ್ರೆಯ ಬಳಿ ಜಮಾಯಿಸಿದ್ದರು.


ಮೃತ ಅಶೋಕ್ ಕುಮಾರ್ ರೈ ಅವರು ಕಡಬ ಪರಿಸರದಲ್ಲಿ ‘ನ್ಯಾಚುರಲ್ ವಾಟರ್’ ವಿತರಕರಾಗಿ ಯಶಸ್ವಿ ಉದ್ಯಮ ನಡೆಸುತ್ತಿದ್ದರು. ಕೇವಲ ಉದ್ಯಮಕ್ಕೆ ಸೀಮಿತವಾಗದ ಅವರು, ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಅಲ್ಲದೆ, ಕಡಬ ಯಕ್ಷ ಗೆಳೆಯರ ಬಳಗದ ಗೌರವಾಧ್ಯಕ್ಷರಾಗಿ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದರು.
ಒಡಿಯೂರು ವಿವಿದ್ದೋದ್ದೇಶ ಸಹಕಾರಿ ಸಂಘದ ಕಡಬ ಶಾಖಾ ಸಲಹಾ ಸಮಿತಿಯ ಸದಸ್ಯರಾಗಿಯೂ ಅವರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದರು.ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಅಶೋಕ್ ಕುಮಾರ್ ಅವರು ಈ ಭಾಗದ ಹಿರಿಯ-ಕಿರಿಯರೆಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು.
ಸದಾ ಹಸನ್ಮುಖಿಯಾಗಿ ಸಮಾಜದ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದ ಇವರ ಅಗಲಿಕೆಯಿಂದ ಕಡಬ ಒಂದು ಬಹುದೊಡ್ಡ ಶಕ್ತಿಯನ್ನು ಕಳೆದುಕೊಂಡಂತಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಕಡಬದ ವಿವಿಧ ಸಂಘ-ಸಂಸ್ಥೆಗಳು ಹಾಗೂ ಪ್ರಮುಖ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
