
ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ಕಾಡುಕೋಣವನ್ನು ಗುಂಡಿಕ್ಕಿ ಭೇಟೆಯಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯ ಅರಣ್ಯ ಅಧಿಕಾರಿಗಳ ದಾಳಿ, ಅಂದಾಜು 8 ಕ್ವಿಂಟಾಲ್ ಮಾಂಸ ಪತ್ತೆ. ಸಂಪೂರ್ಣ ಮಾಹಿತಿ ಇಲ್ಲಿದೆ.


ಕಡಬ: ಸುಬ್ರಹ್ಮಣ್ಯ ಅರಣ್ಯ ವಲಯ ವ್ಯಾಪ್ತಿಯ ಐತ್ತೂರು ಗ್ರಾಮದಲ್ಲಿ ಬೃಹತ್ ಗಾತ್ರದ ಕಾಡುಪ್ರಾಣಿಯೊಂದನ್ನು ಭೇಟೆಯಾಡಿರುವ ಗಂಭೀರ ಪ್ರಕರಣವನ್ನು ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಐತ್ತೂರು ಗ್ರಾಮದ ಓಟೆಕೆಜೆ ಸಮೀಪದ ಅರ್ಬಿತೋಡು ಎಂಬಲ್ಲಿ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಘಟನೆಯ ಹಿನ್ನೆಲೆ:ಜನವರಿ 24ರ ರಾತ್ರಿ ಬೇಟೆಗಾರರ ತಂಡವೊಂದು ಕೋವಿ ಬಳಸಿ ಬೃಹತ್ ಗಾತ್ರದ ಕಾಡುಕೋಣವನ್ನು (Gaur) ಭೇಟೆಯಾಡಿದೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಗೆ ಲಭಿಸಿತ್ತು. ಜನವರಿ 25ರಂದು ಭೇಟೆಗಾರರು ಮಾಂಸ ಮಾಡುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಲವರು ಪರಾರಿಯಾಗಿದ್ದು, ಸುಮಾರು 8 ಕ್ವಿಂಟಾಲ್ ಮಾಂಸ ಇರಬಹುದೆಂದು ಅಂದಾಜಿಸಲಾಗಿದೆ.
ದಾಳಿಯ ವೇಳೆ ಬೇಟೆಗಾರರು ಬಳಸಿದ್ದ ವಾಹನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ತಂಡದಲ್ಲಿ ಐವರು ಸ್ಥಳೀಯರು ಇರುವ ಶಂಕೆ ವ್ಯಕ್ತವಾಗಿದ್ದು, ಶಂಕಿತರಲ್ಲಿ ಒಬ್ಬನೆನ್ನಲಾದ ಪ್ರಸಾದ್ ಎಂಬಾತನ ಮನೆಗೆ ಅಧಿಕಾರಿಗಳು ಭೇಟಿ ನೀಡಿ ಶೋಧ ನಡೆಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗಾಗಿ ಅರಣ್ಯ ಇಲಾಖೆ ಜಾಲ ಬೀಸಿದೆ.


“ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಗುಂಡೇಟಿನಿಂದ ಪ್ರಾಣಿ ಮೃತಪಟ್ಟಿರುವುದು ದೃಢಪಟ್ಟಿದೆ. ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತಪ್ಪಿತಸ್ಥರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.”
> — ವಿಮಲ್ ಬಾಬು, ವಲಯ ಅರಣ್ಯಾಧಿಕಾರಿ, ಸುಬ್ರಹ್ಮಣ್ಯ.
ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಕಾನೂನು:ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 (Wildlife Protection Act, 1972) ರ ಅಡಿಯಲ್ಲಿ ಕಾಡುಕೋಣವು ಅನುಸೂಚಿ-1ರಲ್ಲಿ (Schedule I) ಬರುವ ಸಂರಕ್ಷಿತ ಪ್ರಾಣಿಯಾಗಿದೆ. ಇಂತಹ ಪ್ರಾಣಿಗಳನ್ನು ಭೇಟೆಯಾಡುವುದು ಅಥವಾ ಮಾಂಸಕ್ಕಾಗಿ ಕೊಲ್ಲುವುದು ಜಾಮೀನು ರಹಿತ ಅಪರಾಧವಾಗಿದೆ. ಈ ಕಾಯ್ದೆಯಡಿ ದೋಷಿಗಳಿಗೆ ಕನಿಷ್ಠ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ.
ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ:ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು, ಪಶು ವೈದ್ಯಾಧಿಕಾರಿ ಡಾ. ಯಶಸ್ವಿ ಹಾಗೂ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಬ್ರಹ್ಮಣ್ಯ ಮತ್ತು ಪಂಜ ವಲಯಗಳಲ್ಲಿ ಕಾಡುಪ್ರಾಣಿಗಳ ಭೇಟೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿಬರುತ್ತಿವೆ. ಐದು ತಿಂಗಳ ಹಿಂದೆಯೂ ಇಂತಹದ್ದೇ ಒಂದು ಘಟನೆ ಸುದ್ದಿಯಾಗಿತ್ತು. ಸದ್ಯ ಅರಣ್ಯ ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದೆ.
