
ಐನೆಕಿದು ಸರ್ಕಾರಿ ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಶಿಕ್ಷಣ ಕುಂಠಿತವಾಗಿದೆ. 1ರಿಂದ 7ನೇ ತರಗತಿಗೆ ಕೇವಲ ಇಬ್ಬರು ಶಿಕ್ಷಕರಿರುವ ಹಿನ್ನೆಲೆ ಇಲಾಖೆಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕುಕ್ಕೆ ಸುಬ್ರಹ್ಮಣ್ಯ : ಸರ್ಕಾರ ಒಂದು ಕಡೆ “ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಿ” ಎಂದು ಅಭಿಯಾನ ಮಾಡುತ್ತಿದ್ದರೆ, ಇನ್ನೊಂದೆಡೆ ಇರುವ ಶಾಲೆಗಳಿಗೆ ಕನಿಷ್ಠ ಶಿಕ್ಷಕರನ್ನು ನೇಮಿಸದೆ ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಐನೆಕಿದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ತೀವ್ರ ಕೊರತೆಯಿಂದಾಗಿ ಪೋಷಕರು ಮತ್ತು ಎಸ್ಡಿಎಂಸಿ (SDMC) ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ವಿದ್ಯಾರ್ಥಿಗಳಿದ್ದು, ಸದ್ಯ ಇಡೀ ತಿಂಗಳಿಗೆ ಸರ್ಕಾರ ನೇಮಿಸಿರುವುದು ಕೇವಲ ಒಬ್ಬರೇ ಒಬ್ಬರು ಗೌರವ ಶಿಕ್ಷಕಿಯನ್ನು ಶಾಲೆಯಲ್ಲಿದ್ದ ಮತ್ತೋರ್ವ ಕಾಯಂ ಶಿಕ್ಷಕಿ ಹೆರಿಗೆ ರಜೆ ಮೇಲೆ ತೆರಳಿದ್ದು, ಅವರ ಬದಲಿಗೆ ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ಇಲಾಖೆ ವಿಫಲವಾಗಿದೆ. ನೆರೆಯ ನಡುಗಲ್ಲು ಶಾಲೆಯಿಂದ ಒಬ್ಬ ಶಿಕ್ಷಕಿಯನ್ನು ವಾರಕ್ಕೆ ಕೇವಲ ಮೂರು ದಿನಗಳ ಮಟ್ಟಿಗೆ ನಿಯೋಜಿಸಲಾಗಿದೆ. ವಾರದಲ್ಲಿ ಮೂರು ದಿನ ಇಬ್ಬರು, ಉಳಿದ ದಿನಗಳಲ್ಲಿ ಒಬ್ಬರೇ ಶಿಕ್ಷಕರು 7 ತರಗತಿಗಳನ್ನು ನಿಭಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.


ಶಾಲೆಯ ಅಭಿವೃದ್ಧಿಗಾಗಿ ಸ್ಥಳೀಯ ನಿವಾಸಿ ಶಿವಕುಮಾರ್ ಕೂಜುಗೋಡು ಅವರು ಸ್ವತಃ ಕಂಪ್ಯೂಟರ್ಗಳನ್ನು ಕೊಡುಗೆಯಾಗಿ ನೀಡಿದ್ದಲ್ಲದೆ, ಇಂಗ್ಲಿಷ್ ಮತ್ತು ಕಂಪ್ಯೂಟರ್ ಕಲಿಸಲು ಒಬ್ಬ ಶಿಕ್ಷಕಿಯನ್ನೂ ಒದಗಿಸಿದ್ದಾರೆ. ಎಸ್ಡಿಎಂಸಿ ವತಿಯಿಂದಲೂ ಮಕ್ಕಳ ಹಿತದೃಷ್ಟಿಯಿಂದ ಒಬ್ಬ ಶಿಕ್ಷಕಿಯನ್ನು ನೇಮಿಸಿಕೊಳ್ಳಲಾಗಿದೆ. ಹೀಗೆ ದಾನಿಗಳು ಮತ್ತು ಸಮಿತಿ ಆಸಕ್ತಿ ವಹಿಸುತ್ತಿದ್ದರೂ, ಸರ್ಕಾರದ ಕಡೆಯಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
“ಶಿಕ್ಷಣದ ಗುಣಮಟ್ಟ ಸುಧಾರಿಸಬೇಕಾದ ಇಲಾಖೆಯೇ ಈ ರೀತಿ ಅರೆಬರೆ ವ್ಯವಸ್ಥೆ ಮಾಡಿದರೆ ಮಕ್ಕಳ ಕಲಿಕೆ ಹೇಗೆ ಸಾಧ್ಯ? ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸುವಂತೆ ಪದೇ ಪದೇ ಮನವಿ ಮಾಡಿದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ” ಎಂದು ಪೋಷಕರು ದೂರಿದ್ದಾರೆ. ಗ್ರಾಮೀಣ ಭಾಗದ ಬಡ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿರುವ ಈ ಶಾಲೆಯಲ್ಲಿ ತಕ್ಷಣವೇ ಕಾಯಂ ಅಥವಾ ಪೂರ್ಣಾವಧಿ ಹೆಚ್ಚುವರಿ ಶಿಕ್ಷಕರನ್ನು ನೇಮಿಸದಿದ್ದರೆ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
