
ಕಡಬ: ಕಡಬ ತಾಲೂಕು ಅಭಿವೃದ್ದಿ , ರೈತ , ಕೃಷಿ ಕಾರ್ಮಿಕರ ಹೋರಾಟ ಸಮಿತಿಯಿಂದ ಕಡಬ ಸಮುದಾಯ ಆಸ್ಪತೆಯಲ್ಲಿ ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಗುರುವಾರ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.


ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೆಬ್ ಮಾತನಾಡಿ, ಕಡಬ ತಾಲೂಕು ಕೇಂದ್ರ ಸ್ಥಾನದಲ್ಲಿ ಸುಸಜ್ಜಿತ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು, ಸೂಕ್ತ ಸಿಬ್ಬಂದಿ ಇಲ್ಲದೆ ಅಗತ್ಯ ಸೇವೆ ಲಭ್ಯವಾಗದೆ ರೋಗಿಗಳು ಪರದಾಡುವಂತಾಗಿದೆ. ಖಾಯಂ ವೈದ್ಯರಿಲ್ಲದೆ ಆಸ್ಪತ್ರೆಯ ಸ್ಥಿತಿ ಇನ್ನೂಷ್ಟು ಹದಗೆಟ್ಟಿದೆ.
ಎಂಟು ಗ್ರಾಮಗಳ ವ್ಯಾಪ್ತಿ ಹೊಂದಿರುವ ಈ ಆಸ್ಪತ್ರೆಯಲ್ಲಿ ೨೪ ಗಂಟೆಯೂ ಸೂಕ್ತ ಚಿಕಿತ್ಸೆ ಸಿಗದೆ ದೂರದ ಪುತ್ತೂರು , ಮಂಗಳೂರು ಆಸ್ಪತ್ರೆಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.ಕಡಬದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಪಘಾತವಾದಾಗ ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣಹಾನಿಯಾದ ಘಟನೆಯೂ ನಡೆದಿದೆ. ತಕ್ಷಣ ಸಮಸ್ಯೆ ಸರಿಪಡಿಸಬೇಕು. ಈ ಆಸ್ಪತ್ತೆಯನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಆಗ್ರಹಿಸಿದರು. ತಕ್ಷಣ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರಮುಖರಾದ ಸತೀಶ್ ಶೆಟ್ಟಿ ಬೀರುಕ್ಕು, ಇಲ್ಯಾಸ್ ಜೆ.ಕೆ ಕೋಡಿಂಬಾಳ, ಕಿಶನ್ ರೈ, ಆಲಿ ಹಳೆಸ್ಷೇಷನ್, ಕಡಬ ರಿಕ್ಷಾ ಚಾಲಕ ಮಾಲಕ ಸಂಘದ ಮಾಜಿ ಅಧ್ಯಕ್ಷ ಚೆನ್ನಪ್ಪ ಗೌಡ ಮೊದಲಾದವರು ಪ್ರತಿಭಟನೆ ಉದ್ದೇಶೆಸಿ ಮಾತನಾಡಿದರು. ಹಲವಾರು ಮುಖಂಡರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.


ಪ್ರತಿಭಟನೆ ಬಳಿಕ ಕಡಬ ತಾಲೂಕು ಆಡಳಿತ ಕಚೇರಿ ಉಪತಹಶೀಲ್ದಾರ ಸಯ್ಯದುಲ್ಲ ಖಾನ್ ಮತ್ತು ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರಿಗೆ ಮನವಿ ನೀಡಿದರು. ಈ ವೇಳೆ ಮಾತನಾಡಿದ ಡಾ. ದೀಪಕ್ ರೈ ಅವರು, ಡೆಂಟಲ್, ಅಯುಶ್, ಮಕ್ಕಳ ತಜ್ಞರು ಈಗಾಗಲೇ ಕರ್ತವ್ಯದಲ್ಲಿದ್ದಾರೆ. ಈ ಹಿಂದೆ ಕರ್ತವ್ಯದಲ್ಲಿದ್ದ ಖಾಯಂ ವೈದ್ಯರು ನಿವೃತ್ತಿ ಬಳಿಕ ವಾರದಲ್ಲಿ ಮೂರು ದಿನ ಒಬ್ಬರು ವೈದ್ಯರು ಹಾಗು ಇನ್ನುಳಿದ ದಿನದಲ್ಲಿ ಕೋಡಿಂಬಾಳದ ಒಬ್ಬರು ವೈದ್ಯರು ಇಲ್ಲಿ ಕರ್ತವ್ದಲ್ಲಿದ್ದಾರೆ.
ಇನ್ನುಳಿದಂತೆ ತಜ್ಞ ವೈದ್ಯರ, ಸಿಬ್ಬಂದಿಗಳ ನೇಮಕವಾಗಬೇಕಷ್ಟೆ ಇದಕ್ಕೆಲ್ಲ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಗುರುವಾರ ಮಂಗಳೂರಿನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ನೇಮಕವಾದ ವೈದ್ಯರಲ್ಲಿ ಎಷ್ಟು ಮಂದಿ ಕಡಬದಲ್ಲಿ ಕರ್ತವ್ಯ ನಿರ್ವಹಿಸಲು ಒಪ್ಪಿಕೊಂಡಿದ್ದಾರೆ ಎನ್ನುವ ಸ್ಪಷ್ಟತೆ ಇನ್ನಷ್ಟೆ ಸಿಗಬೇಕಾಷ್ಟೆ . ಸಮಸ್ಯೆ ಪರಿಹರಿಸಲು ಇಲಾಖೆಯಿಂದ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
