
ಕಡಬ: ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಮಧುಶ್ರೀ ಕೆ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ಹೊರರೋಗಿ ವಿಭಾಗದ ಕರ್ತವ್ಯವನ್ನು ನಿರ್ವಹಿಸಲು ವಾರದಲ್ಲಿ ಮೂರು ದಿನ ನಿಯೋಜಿಸಿ ದಕ್ಷಿಣ ಕನ್ನ ಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರು ನ.14 ರಂದು ಅಧಿಕೃತಜ್ಞಾಪನಾ ಪತ್ರ ಹೊರಡಿಸಿದ್ದಾರೆ.


ಆರೋಗ್ಯ ಕೇಂದ್ರದ ವಿವಿಧ ಸಮಸ್ಯೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ನ. 20 ಕಡಬ ತಾಲೂಕು ಅಖಿಲ ಕರ್ನಾಟಕ ರೈತ, ಕೃಷಿ, ಕಾರ್ಮಿಕರ ಒಕ್ಕೂಟ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಕಡಬದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ವೈದ್ಯಾಧಿಕಾರಿ ಹಾಗೂ ತಜ್ಞರ ಹುದ್ದೆಗಳು ತೆರವು ಇರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಸದ್ರಿ ಕೇಂದ್ರದ ಹೊರರೋಗಿ ವಿಭಾಗದ ಕರ್ತವ್ಯವನ್ನು ವಾರದಲ್ಲಿ ಮೂರು ದಿನ ಅಂದರೆ ಸೋಮವಾರ, ಗುರುವಾರ ಮತ್ತು ಶನಿವಾರ ಕರ್ತವ್ಯ ನಿರ್ವಹಿಸಲು ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ನಿಯೋಜಿಸಿ ಆದೇಶಿಸಿದೆ.


ನಿಯೋಜಿತ ವೈದ್ಯಾಧಿಕಾರಿಯವರು ಯಾವುದೇ ದೂರುಗಳಿಗೆ ಆಸ್ಪದ ನೀಡದೇ ನಿಯೋಜಿತ ದಿನಗಳಂದು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಲು ಸೂಚಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನ. 20 ರಂದು ಬೆಳಗ್ಗೆ 10.30ಕ್ಕೆ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿದ ಹಿನ್ನೆಲೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಅವರು ನ.12 ರಂದು ಸಮುದಾಯ ಸರಕಾರಿ ಆಸ್ಪತ್ರೆಗೆ ಭೇಟಿ ಚರ್ಚಿಸಿದ್ದರು.ಅಲ್ಲದೆ ಪ್ರತಿಭಟನೆ ಹಿಂಪಡೆಯುವಂತೆ ಮುಖಂಡರ ಮನವೊಲಿಸಿದ್ದರು.
