ದಕ್ಷಿಣ ಕನ್ನಡ: ಪುಟಾಣಿ ಮಗುವಿನೊಂದಿಗೆ ಸಮುದ್ರಕ್ಕೆ ಹಾರಿ ಸಾಯಲು ಹೋಗಿದ್ದ ಯುವಕ: ವಿಡಿಯೋ ಬೆನ್ನತ್ತಿ ಜೀವ ಉಳಿಸಿದ ಪೊಲೀಸರು

kadaba times

ಮಂಗಳೂರು: ಪತ್ನಿ ಜೊತೆ ಮನಸ್ತಾಪ ಉಂಟಾಗಿ  ಪತಿ ತನ್ನ ನಾಲ್ಕು ವರ್ಷದ ಹೆಣ್ಣು ಮಗುವಿನ ಜೊತೆಗೆ ಸಮುದ್ರಕ್ಕೆ ಹಾರಿ ಸಾಯಲು ಹೋಗಿದ್ದು ಅದರ ವಿಡಿಯೋ ಮಾಡಿ ವಾಟ್ಸಪ್ ಗ್ರೂಪಿಗೆ ಹಾಕಿದ್ದಲ್ಲದೆ ಬಳಿಕ ತನ್ನ ಮನೆಗೆ ಬಂದು ನೇಣು ಹಾಕಲು ಯತ್ನಿಸಿದಾಗ ಪೊಲೀಸರು ಕೂಡಲೇ ಎಚ್ಚತ್ತುಕೊಂಡು  ಆತನನ್ನು ಸಾವಿನ ದವಡೆಯಿಂದ ಪಾರು ಮಾಡಿದ ಘಟನೆ ಮಂಗಳೂರಿನ  ಕಾವೂರಿನಲ್ಲಿ ನಡೆದಿದೆ.

kadaba times
uniq

ಕಾವೂರು ಶಾಂತಿನಗರ ನಿವಾಸಿ ರಾಜೇಶ್  ಸಾಯಲು ಹೋಗಿ ಪೊಲೀಸರಿಂದ ರಕ್ಷಿಸಲ್ಪಟ್ಟ ವ್ಯಕ್ತಿ.  ಈತ ಬಜ್ಪೆಯ ಯುವತಿಯನ್ನು ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗು ಇದೆ.  ಇತ್ತೀಚೆಗೆ ಕೆಲವು ಸಮಯದಿಂದ ಗಂಡ ತನ್ನ ಪತ್ನಿಯ ಬಗ್ಗೆ ಅನುಮಾನ ಪಟ್ಟಿದ್ದ ಎನ್ನಲಾಗಿದೆ.

ಸೋಮವಾರ ಸಂಜೆ ತನ್ನ ಮಗಳನ್ನು ಕರ್ಕೊಂಡು ತಣ್ಣೀರುಬಾವಿ ಬೀಚ್ ಗೆ ಹೋಗಿದ್ದು ನಾವು ಸಾಯೋಣ ಮಗಳೇ, ಅವಳಿಗೆ ಬೇಕಾದ ರೀತಿ ಇರಲಿ, ನಿನ್ನ ತಾಯಿ ಸರಿ ಇಲ್ಲ.. ನಮಗೆ ಯಾರೂ ಬೇಡ ಎನ್ನುತ್ತ ನೀರಿನತ್ತ ನಡೆಯುವ ರೀತಿ ವಿಡಿಯೋ ಮಾಡಿದ್ದಾನೆ. ಅಲ್ಲದೆ, ವಿಡಿಯೋವನ್ನು ತನ್ನ ಅಕ್ಕ ಮತ್ತು ಇತರ ಸಂಬಂಧಿಕರಿಗೂ ಹಾಕಿದ್ದಾನೆ.  ವಿಡಿಯೋ ಕ್ಷಣಾರ್ಧದಲ್ಲಿ ವಾಟ್ಸಪ್ ನಲ್ಲಿ ಷೇರ್ ಆಗಿದ್ದು ಏಳು ಗಂಟೆ ವೇಳೆಗೆ ಪಣಂಬೂರು ಪೊಲೀಸರಿಗೆ ತಲುಪಿತ್ತು.‌ ಆದರೆ ವಿಡಿಯೋದಲ್ಲಿ ಅವನ ಮುಖ ಇರಲಿಲ್ಲ. ಕೇವಲ ಸಮುದ್ರದ ನೀರಿನ ಕಡೆಗೆ ನಡೆಯುತ್ತಾ ಹೋಗುವುದು, ಅದರಲ್ಲಿ ತಂದೆ- ಮಗಳ ನೆರಳು ಮಾತ್ರ ಇತ್ತು.

ಪಣಂಬೂರು ಬೀಚ್ ಇರಬೇಕೆಂದು ಪೊಲೀಸರು ಕೂಡಲೇ ಅಲ್ಲಿಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ಇನ್ಸ್ ಪೆಕ್ಟರ್ ಮಹಮ್ಮದ್ ಸಲೀಂ ವಿಡಿಯೋವನ್ನು ನೋಡಿ, ತಣ್ಣೀರುಬಾವಿ ಆಗಿರಬೇಕೆಂದು ಠಾಣೆಯಲ್ಲಿದ್ದ ಎಲ್ಲ ಸಿಬಂದಿಯನ್ನೂ ಹುಡುಕಲು ಸೂಚಿಸಿದ್ದಾರೆ.

kadaba times
kadaba times

ಸೈಬರ್ ಪೊಲೀಸ್ ಸಹಾಯ ಪಡೆದು ಆತನ ನಂಬರ್ ಟ್ರೇಸ್ ಮಾಡಿ ಲೊಕೇಶನ್ ನೋಡಿದಾಗ, ಕಾವೂರು ಶಾಂತಿನಗರ ತೋರಿಸಿತ್ತು. ಕೂಡಲೇ ಕಾವೂರು ಠಾಣೆಗೆ ತಿಳಿಸಿ, ಪಣಂಬೂರು ಠಾಣೆಯ ಇನ್ನೊಂದು ತಂಡವನ್ನು ಆ ಜಾಗಕ್ಕೆ ಇನ್ಸ್ ಪೆಕ್ಟರ್ ಸಲೀಂ ಕಳಿಸಿಕೊಟ್ಟಿದ್ದರು.  ಫಕೀರಪ್ಪ, ಶರಣಪ್ಪ ಮತ್ತು ರಾಕೇಶ್ ಅವರಿದ್ದ ಪಣಂಬೂರು ಪೊಲೀಸರು ಹತ್ತು ನಿಮಿಷದಲ್ಲಿ ಅಲ್ಲಿಗೆ ತಲುಪಿ ಮನೆ ಪತ್ತೆ ಮಾಡಿದ್ದರು. ಮನೆಗೆ ಬಾಗಿಲು ಹಾಕಿದ್ದು ಹೊರಗಿನಿಂದ ಬಡಿದರೂ ಸ್ಪಂದನೆ ಬರಲಿಲ್ಲ. ಹೀಗಾಗಿ ಇನ್ಸ್ ಪೆಕ್ಟರ್ ಸೂಚನೆಯಂತೆ, ಮನೆ ಬಾಗಿಲು ಒಡೆದು ಒಳಗೆ ಹೋಗಿದ್ದು ಪಕ್ಕಾಸಿಗೆ ನೇಣು ಹಗ್ಗ ಹಾಕಿ ಮಗಳ ಜೊತೆಗೆ ನೇಣಿಗೆ ಶರಣಾಗಲು ರೆಡಿ ಮಾಡಿಕೊಳ್ತಿದ್ದ‌. ಪೊಲೀಸರು ಕೂಡಲೇ ಆತನನ್ನು ಹಿಡಿದುಕೊಂಡಿದ್ದು ಕೆಲವೇ ಕ್ಷಣಗಳಲ್ಲಿ ಸಾಯುತ್ತಿದ್ದ ತಂದೆ- ಮಗಳನ್ನು ರಕ್ಷಣೆ ಮಾಡಿದ್ದಾರೆ.

ಕಾವೂರು ಠಾಣೆಯಲ್ಲಿ ಮಂಗಳವಾರ ಗಂಡ- ಹೆಂಡತಿ ಇಬ್ಬರನ್ನೂ ಕರೆಸಿ ಪೊಲೀಸರು ಬುದ್ಧಿವಾದ ಹೇಳಿ ಮಾತುಕತೆ ನಡೆಸಿದ್ದಾರೆ. ಒಟ್ಟಿನಲ್ಲಿ ಪಣಂಬೂರು ಪೊಲೀಸರ ಸಕಾಲಿಕ ಪ್ರಯತ್ನ ಮತ್ತು ಸಮಯ ಪ್ರಜ್ಞೆಯಿಂದಾಗಿ ಸಾಯಲು ಮುಂದಾಗಿದ್ದ ಜೀವಗಳು ಉಳಿದುಬಿಟ್ಟಿವೆ. ಇದಕ್ಕಾಗಿ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಆದಿಯಾಗಿ ಸಾರ್ವಜನಿಕರ ಕಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿದೆ.

Related Articles

Latest Articles