
ಕಡಬ: ಮಹಿಳೆಯೊಬ್ಬರು ರಾತ್ರಿ ಮಲಗಿದ್ದ ವೇಳೆ ದಿಢೀರ್ ವ್ಯಕ್ತಿಯೊಬ್ಬ ಬಂದು ಅಸಭ್ಯವಾಗಿ ವರ್ತಿಸಿದಲ್ಲದೆ, ಹಲ್ಲೆಗೈದು ಜಾತಿ ನಿಂದನೆ ಗೈದ ಆರೋಪದಲ್ಲಿ ಕಡಬ ಠಾಣೆಯಲ್ಲಿ ನ.14 ರಂದು ಪ್ರಕರಣ ದಾಖಲಾಗಿತ್ತು.


ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಐತ್ತೂರು ಗ್ರಾಮದ ಉಮೇಶ್ ಗೌಡ ಎಂಬಾತನನ್ನು ಎಸ್.ಐ ಅಭಿನಂದನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ನ.13 ರ ಮದ್ಯರಾತ್ರಿ ಮಹಿಳೆಯು ಮಲಗಿದ್ದ ವೇಳೆ ಏಕಾಏಕಿ ಬಂದು ಅಸಭ್ಯವಾಗಿ ವರ್ತಿಸಿ ಮನೆ ಮಂದಿಗೆ ಹಲ್ಲೆಗೈದು ಜಾತಿ ನಿಂದನೆಗೈದು ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು. ಅಲ್ಲದೆ ಈತ ಈ ಹಿಂದೆ ಪೋಕ್ಸೋ ಪ್ರಕರಣದ ಆರೋಪಿಯಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಆರೋಪಿಯ ವಿರುದ್ದ ಭಾರತೀಯ ನ್ಯಾಯ ಸಂಹಿತೆ ಮತ್ತು ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.


ನ.14 ರಂದು ಕೇಸು ದಾಖಲಾದ ಹಿನ್ನೆಲೆ ಆರೋಪಿಯನ್ನು ಬಂಧಿಸಿಲ್ಲವೆಂದು ಭೀಮ್ ಆರ್ಮಿ ಸಂಘಟನೆಯ ಪ್ರಮುಖರು ಆಕ್ರೋಶ ಹೊರ ಹಾಕಿದ್ದರು. ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸಬೇಕು ಎಂದು ಆಗ್ರಹಿಸಿದ್ದರು.ಎಲ್ಲಾ ಬೆಳವಣಿಗೆಗಳ ನಡುವೆ ಆರೋಪಿಯ ಬಂಧನವಾಗಿರುವುದಾಗಿ ತಿಳಿದು ಬಂದಿದೆ.
