
ಕಡಬ: ತಾಲೂಕಿನ ಕೊಣಾಜೆ ಗ್ರಾಮದ ಪಟ್ಟೆ ಬಳಿ ಎರಡು ದಿನಗಳ ಹಿಂದೆ ಕಾಡಾನೆ ಕಾಣಿಸಿಕೊಂಡಿದೆ. ಕೋನಡ್ಕ ಅಂಗನವಾಡಿಯ ಹಿಂದುಗಡೆ ಮೂಲಕ ಕಾಡಾನೆ ಸಂಚಾರ ಮಾಡಿದ್ದು ಸ್ಥಳೀಯರು ತಡವಾಗಿ ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


ಅರಣ್ಯಾಧಿಕಾರಿಗಳು ಈಗಾಗಲೇ ನಿಗಾ ವಹಿಸಿದ್ದು ಕಾಡಾನೆಗಳ ಸಂಚಾರದ ಬಗ್ಗೆ ಜನರಿಗೆ ಕಾಲ ಕಾಲಕ್ಕೆ ಮಾಹಿತಿ ನೀಡುವ ಕಾರ್ಯವನ್ನೂ ಮಾಡಲಾಗುತ್ತಿದೆ. ಆದರೂ ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡಾನೆ ಸಂಚಾರದಿಂದ ಗ್ರಾಮದ ನಿವಾಸಿಗಳು ಜೀವ ಭಯದಲ್ಲೇ ಓಡಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ .


ಎರಡು ವಾರಗಳ ಹಿಂದೆ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ವ್ಯಾಪ್ತಿಯಲ್ಲಿ ಎರಡು ಕಾಡಾನೆಗಳು ಸಂಚಾರ ಮಾಡಿತ್ತು. ಕಡಬ,ಬೆಳ್ತಂಗಡಿ ತಾಲೂಕಿನ ರಕ್ಷಿತಾರಣ್ಯಗಳಲ್ಲಿ ಕಾಡಾನೆಗಳು ನಿರಂತರ ಸಂಚಾರ ಮಾಡುತ್ತಿದೆ.ಜೊತೆಗೆ ಕೃಷಿ ತೋಟಗಳಿಗೂ ನುಗ್ಗಿ ಹಾನಿ ಮಾಡುತ್ತಿರುವುದು ತಿಳಿದು ಬಂದಿದೆ.
