
ಕರ್ನಾಟಕ: ಸಮಾಜದಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಬಂದಿದೆ. ಇನ್ನೂ ಒಂದು ವಾರದಲ್ಲಿ ಗೃಹಲಕ್ಷ್ಮಿಯ 23ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ವರ್ ಭರವಸೆ ನೀಡಿದ್ದಾರೆ.


ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 1.27ಕೋಟಿ ಫಲಾನುಭವಿಗಳಿದ್ದಾರೆ. ಈವರೆಗೆ 22 ಕಂತಿನ ಯೋಜನೆಯ ಹಣ ಜಮಾವಣೆಯಾಗಿದೆ. ಈವರೆಗೂ ತಲಾ 44000 ರೂ ಖಾತೆಗೆ ಹಾಕಲಾಗಿದೆ. ಇದೀಗ ಸೆಪ್ಟೆಂಬರ್ ತಿಂಗಳ 23ನೇ ಕಂತಿನ ಹಣ ಬಿಡುಗಡೆಗೆ ಕ್ರಮವಹಿಸಲಾಗಿದ್ದು, ಒಂದು ವಾರದಲ್ಲಿ (ನವೆಂಬರ್ 28ರೊಳಗೆ) ಹಣ ಬಿಡುಗಡೆಯಾಗಲಿದೆ,” ಎಂದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟನೆ ಕುರಿತು ರಾಜ್ಯ ಮಟ್ಟದ ಸಮಾವೇಶದ ಪೂರ್ವಭಾವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆಗೆ 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ನವೆಂಬರ್ 28 ರಂದು ಬೆಂಗಳೂರಿನಲ್ಲಿ ನಡೆಯುಲಿರುವ ರಾಜ್ಯ ಮಟ್ಟದ ಸಮಾವೇಶದಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ ಪೂರಕವಾದ ಮೂರು ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದ್ದು, ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಾಹಿಸಿ ಯಶಸ್ವಿಗೊಳಿಸಬೇಕು ಎಂದರು.
