
ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕಳೆದ 131 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪುತ್ತೂರು ನಿವಾಸಿ ಅಪೂರ್ವ ಕೆ. ಭಟ್ (32) ಅವರು ಚಿಕಿತ್ಸೆ ಫಲಿಸದೆ ಇತ್ತಿಚೆಗೆ ಮೃತಪಟ್ಟಿದ್ದು, ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅವರ ತಂದೆ ಈಶ್ವರ ಭಟ್ (70) ಇಂದು ನಿಧನರಾಗಿದ್ದಾರೆ.


ಪುತ್ತೂರಿನಲ್ಲಿ ಸಂಭವಿಸಿದ್ದ ಭೀಕರ ಬಸ್ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಂಗಳೂರಿನ ಆಸ್ಪತ್ರೆಯಲ್ಲೇ ಅಪೂರ್ವ ನಿಧನರಾಗಿದ್ದರು, ಅವರ ತಂದೆ ಅಂಡೆಪುಣಿ ಈಶ್ವರ ಭಟ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ನಂತರ ಬಿಡುಗಡೆಗೊಂಡು ಪುತ್ತೂರಿನ ಧನ್ವಂತರಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ದುರಂತದದ ಹಿನ್ನೆಲೆ: ಮೇ 27ರಂದು ಪುತ್ತೂರಿನ ಹೊರವಲಯದ ಮುರ ಜಂಕ್ಷನ್ ಬಳಿ ಈ ದುರ್ಘಟನೆ ನಡೆದಿತ್ತು. ಮಾಣಿ ಮೈಸೂರು ಹೆದ್ದಾರಿಯಲ್ಲಿ ಪುತ್ತೂರು ಪೇಟೆಯಿಂದ ತಮ್ಮ ತಂದೆ ಈಶ್ವರ್ ಭಟ್ ಅವರ ಜತೆ ವ್ಯಾಗನರ್ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ, ಪಡ್ನೂರಿಗೆ ತಿರುಗುವ ಒಳರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಬೆಂಗಳೂರಿನಲ್ಲಿದ್ದ ಅಪೂರ್ವ ಶ್ರಾದ್ದ ಕಾರ್ಯ ನಿಮಿತ್ತ ಬೆಳಿಗ್ಗೆ ಪುತ್ತೂರು ಬಸ್ ನಿಲ್ದಾಣಕ್ಕೆ ಬಸ್ ನಲ್ಲಿ ಬಂದು ನಂತರ ತಂದೆ ಜೊತೆ ಕಾರಿನಲ್ಲಿ ತೆರಳುತ್ತಿದ್ದರು.


ಪುತ್ತೂರಿನಿಂದ ಮಂಗಳೂರಿನತ್ತ ವೇಗವಾಗಿ ಚಲಿಸುತ್ತಿದ್ದ MERCY ಹೆಸರಿನ ಖಾಸಗಿ ಬಸ್. ಅಪೂರ್ವರವರ ತಂದೆ ಚಲಾಯಿಸುತ್ತಿದ್ದ ಅವರ ಕಾರಿಗೆ ಡಿಕ್ಕಿ ಹೊಡೆದಿತ್ತು . ಅಪಘಾತದ ರಭಸಕ್ಕೆ ಕಾರು ಹಲವು ಮೀಟರ್ ದೂರಕ್ಕೆ ಎಸೆಯಲ್ಪಟ್ಟು ನುಜ್ಜುಗುಜ್ಜಾಗಿತ್ತು. ಅಪಘಾತದಲ್ಲಿ ತಂದೆ ಮಗಳು ಗಂಭೀರ ಗಾಯಗೊಂಡಿದ್ದು, ಅಪೂರ್ವ ಅವರ ಮಗಳು ಪವಾಡ ರೀತಿ ಪಾರಾಗಿದ್ದರು.
