
ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಡ್ಯಡ್ಕ ವಾರ್ಡಿನ ಮಡ್ಯಡ್ಕ- ಬೊಳ್ಳೆಕುಕ್ಕು, -ಚಾಕೋಟೆ ರಸ್ತೆ ಹದಗೆಟ್ಟಿದ್ದು ಗ್ರಾಮಸ್ಥರ ವಿನಂತಿ ಮೇರೆಗೆ ಪ.ಪಂ ಅಧ್ಯಕ್ಷೆ ತಮ್ಮನಾ ಜಬೀನ್ ಭೇಟಿ ನೀಡಿ ಸಮಸ್ಯೆ ಆಲಿಸಿದರು.


ಪತ್ರಕರ್ತ ಪ್ರಕಾಶ್ ಕೋಡಿಂಬಾಳ ಅವರು ವಾರ್ಡಿನ ರಸ್ತೆ ಮತ್ತು ಇನ್ನಿತರ ಸಮಸ್ಯೆಗಳ ಬಗ್ಗೆ ವಿವರಿಸಿದರು. ದಿನಂಪ್ರತಿ ವಾಹನಗಳು, ಶಾಲಾಮಕ್ಕಳು ಸಂಚರಿಸುವ ಈ ರಸ್ತೆಯ ಪರಿಸ್ಥಿತಿ ಮಳೆಗಾಲದಲ್ಲಿ ಸಂಪೂರ್ಣ ಹದಗೆಟ್ಟು ವಾಹನ ಸಂಚಾರ, ಪಾದಾಚಾರಿಗಳಿಗೆ ನಡೆದಾಡಲು ಸಾಧ್ಯವಿಲ್ಲದಂತಾಗಿದೆ ದ.ಕ.ಜಿಲ್ಲಾಧಿಕಾರಿ, ಪುತ್ತೂರು ಸಹಾಯಕ ಆಯುಕ್ತರಿಗೆ, ಕಡಬ ತಹಸೀಲ್ದಾರ್ಗೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಚುನಾವಣೆಯ ಸಂದರ್ಭ ಚುನಾವಣಾಧಿಕಾರಿಗಳಿಗೂ ದೂರು ನೀಡಲಾಗಿತ್ತು. ಆದರೆ ಜನರ ದೂರನ್ನು ಯಾರೊಬ್ಬರೂ ಗಂಭೀರವಾಗಿ ಪರಿಗಣಿಸಲಿಲ್ಲ.
ಅನುದಾನ ಇಲ್ಲ ಎಂಬ ಕಾರಣ ಹೇಳಿಕೊಂಡು ರಸ್ತೆಯ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ ಎಂದು ಸಮಸ್ಯೆಗಳನ್ನು ವಿವರಿಸಿದರು. ಎರಡು ಕಿಮೀ ರಸ್ತೆಗಾಗಿ ಕಳೆದ ಹಲವು ವರ್ಷಗಳಿಂದ ಇಲ್ಲಿನ ಸಮಾನ ಮನಸ್ಕರು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ನೀಡುತ್ತಲೇ ಬಂದಿರುವ ಬಗ್ಗೆಯೂ ಗ್ರಾಮಸ್ಥರು ವಿವರಿಸಿದರು .


ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ತಮ್ಮನಾ ಜಬೀನ್ ಅವರು ಈ ಪ್ರದೇಶದ ರಸ್ತೆಯ ಸಮಸ್ಯೆ, ವಿದ್ಯುತ್, ನೀರಿನ ಸಮಸ್ಯೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಾರ್ಡ್ ಸದಸ್ಯ ಮೋಹನ ಸೇರಿದಂತೆ ಸ್ಥಳೀಯರು ಹಾಜರಿದ್ದರು.
