
ಕಡಬ ಟೈಮ್ಸ್, ಸುಳ್ಯ: ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಗೆ ಹೋದ ಶಿಕ್ಷಕಿಯೊಬ್ಬರ ಮೇಲೆ ಮನೆಯೊಂದರಲ್ಲಿದ್ದ ನಾಯಿ ದಾಳಿ ನಡೆಸಿದ ಘಟನೆ ಅ.3 ರಂದು ಸುಳ್ಯದ ಮಧ್ಯಾಹ್ನ ಕೊಡಿಯಾಲ ಗ್ರಾಮದಿಂದ ವರದಿಯಾಗಿದೆ.


ಕೊಡಿಯಾಲದ ಮೂವಪ್ಪೆ ಶಾಲೆಯ ಶಿಕ್ಷಕಿಯಾಗಿರುವ ನಿರ್ಮಲರವರು ಗಣತಿ ಕಾರ್ಯ ನಡೆಸುತ್ತಾ ಮಧ್ಯಾಹ್ನ ವೇಳೆಗೆ ನಿಡ್ಮಾರು ಎಂಬಲ್ಲಿಯ ಮನೆಯೊಂದಕ್ಕೆ ಹೋದರು. ಆ ವೇಳೆ ಅಂಗಳದಲ್ಲಿದ್ದ ನಾಯಿ ಒಮ್ಮೆಲೇ ಮೇಲೆ ದಾಳಿ ನಡೆಸಿದೆ.
ಮೈಮೇಲೆ ಹಾರಿ ನಾಯಿ ದಾಳಿ ನಡೆಸಿದ ರಭಸಕ್ಕೆ ಬಟ್ಟೆ ಹರಿದು ಹೋಗಿದೆ. ನಾಯಿಗೆ ಅಡ್ಡಲಾಗಿ ಬ್ಯಾಗನ್ನು ಮುಂದೆ ಮಾಡಿದಾಗ ಬ್ಯಾಗನ್ನು ನಾಯಿ ಎಳೆದು ಹಾಕಿದೆ. ನಾಯಿ ಶಿಕ್ಷಕಿಗೆ ಕಚ್ಚಲು ಮುಂದಾಗುತ್ತಿದ್ದಂತೆ ಮನೆಯ ಮಾಲಕರು ಬಂದು ನಾಯಿಯನ್ನು ಹಿಡಿದುಕೊಂಡಿದ್ದಾರೆ.


ಈ ಘಟನೆಯಿಂದ ಭಯಭೀತರಾದ ಶಿಕ್ಷಕಿ ಗಣತಿ ಮುಂದುವರಿಸಲಾಗದೆ ಮನೆಗೆ ಹಿಂತಿರುಗಿದರೆಂದು ತಿಳಿದುಬಂದಿದೆ. ಹಲವು ಮನೆಗಳಲ್ಲಿ ನಾಯಿಯಿಂದ ಈ ರೀತಿಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಗಣತಿ ಮುಗಿಯುವವರೆಗೆ ಮನೆಯಲ್ಲಿರುವ ನಾಯಿಗಳನ್ನು ಜನರು ಕಟ್ಟಿಹಾಕುವ ಅಗತ್ಯವಿದೆ ಎಂದು ಗಣತಿದಾರರು ಅಪೇಕ್ಷೆ ಪಟ್ಟಿದ್ದಾರೆ.
