
ಕಡಬ ಪಟ್ಟಣ :ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಮಡ್ಯಡ್ಕ-ಬೊಳ್ಳೆಕುಕ್ಕು-ಚಾಕೋಟೆ ರಸ್ತೆ ತೀರ ಹದಗೆಟ್ಟಿದ್ದು ಸಮರ್ಪಕವಾಗಿ ದುರಸ್ತಿಗೊಳಿಸದಕ್ಕೆ ವಾರ್ಡಿನ ಜನರು ಆಕ್ರೋಶ ಹೊರಹಾಕಿದ್ದರು. ಜೊತೆಗೆ ಪ.ಪಂ ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ್ದರು.ಇದಾದ ಬಳಿಕ ಪಟ್ಟಣ ಪಂಚಾಯತ್ ಅಧಿಕಾರಿಗಳು ಭೇಟಿ ದುರಸ್ತಿ ಪಡಿಸುವ ಭರವಸೆ ನೀಡಿದ್ದರು.


ಇದೀಗ ಇನ್ನೂ ದುರಸ್ತಿಯಾಗದ ಹಿನ್ನೆಲೆ ನಗರೋತ್ಥಾನ ಯೋಜನೆಯಲ್ಲಿ ರಸ್ತೆ ದುರಸ್ತಿ ಪಡಿಸುವಂತೆ ದ.ಕ ಜಿಲ್ಲಾಧಿಕಾರಿ ಎಚ್ ವಿ ದರ್ಶನ್ ಅವರಿಗೆ ಗ್ರಾಮಸ್ಥರ ಪರವಾಗಿ ಪ್ರಕಾಶ್ ಕೋಡಿಂಬಾಳ ಎಂಬವರು ಸೆ.17 ರಂದು ಮನವಿ ಸಲ್ಲಿಸಿದ್ದಾರೆ.
ಖುದ್ದು ಭೇಟಿ ಮಾಡಿ ರಸ್ತೆ ಅವ್ಯವಸ್ಥೆ ಬಗ್ಗೆ ವಿವರಿಸಿದ್ದಾರೆ. ಮನವಿ ಸ್ವೀಕರಿಸುವ ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಮನವಿಯಲ್ಲಿ ಏನಿದೆ?: ಸುಮಾರು 50 ವರ್ಷಗಳಿಂದ ಸಣ್ಣಪುಟ್ಟ ಕಾಮಗಾರಿಗಳು ನಡೆದದ್ದು ಬಿಟ್ಟರೆ ಹೆಚ್ಚಿನ ಅಭಿವೃದ್ಧಿಯೇ ಕಾಣದ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಮಡ್ಯಡ್ಕ-ಬೆಳ್ಳೆಕುಕ್ಕು, ಚಾಕೊವೆ ರಸ್ತೆಯು ತೀರಾ ಹದೆಗೆಟ್ಟಿದೆ. ಸದ್ರಿ ರಸ್ತೆಯಲ್ಲಿ ಎರಡು ಬದಿಗಳಲ್ಲಿ ಗಿಡಗಳು ಬೆಳೆದು. ರಸ್ತೆಯ ಎರಡು ಬದಿಗಳಲ್ಲಿ ಮಳೆಯ ನೀರು ಹರಿದು ಹೋಗದಂತೆ ಆಗಿರುತ್ತದೆ. ಈ ರಸ್ತೆಯಲ್ಲಿ ಸಂಚಾರಿಸುವ ಶಾಲಾ ಮಕ್ಕಳು, ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.


ಇಲ್ಲಿನ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕಳೆದ ವರ್ಷ ಪತ್ತೂರು ಉಪ ಆಯುಕ್ತರಾದ ಜುಭೀನ್ ಮೊಹಪಾತ್ರರವರು ಇಲ್ಲಿಗೆ ಭೇಟಿ ನೀಡಿ ಈ ರಸ್ತೆಯನ್ನು ಸರಿಪಡಿಸುವಂತೆ ಮತ್ತು ಚರಂಡಿ ದುರಸ್ಥಿ ನೀರು ಹರಿಯುತ್ತಿರುವ ಚರಂಡಿಯಲ್ಲಿ ಹಾಕಿರುವ ವಿದ್ಯುತ್ ಕಂಬಗಳ ತೆರವು, ವಿದ್ಯುತ್ ಕಂಬಗಳ ಮೇಲೆ ಬಗ್ಗಿರುವ ಮರಗಳ ತೆರವು, ಪಂಚಾಯತ್ ರಸ್ತೆಯನ್ನು ಅತಿಕ್ರಮಣ ಮಾಡಿದವರಿಗೆ ಹಾಗೂ ಮಣ್ಣು ಹಾಕಿ ನೀರಿನ ಹರಿವಿಗೆ ತೊಂದರೆ ಮಾಡಿದವರಿಗೆ ನೋಟೀಸ್ ನೀಡುವಂತೆ ಮೆಸ್ಕಾಂ, ಅರಣ್ಯ, ಕಂದಾಯ, ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಹಿನ್ನಲೆಯಲ್ಲಿ ಆ ವರ್ಷ ರಸ್ತೆಯನ್ನು ಸ್ವಲ್ಪ ಮಟ್ಟಿಗೆ ದುರಸ್ಥಿ ಮಾಡಲಾಗಿತ್ತು. ನಂತರದಲ್ಲಿ ಯಾವುದೇ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳದೆ ಇಂದಿಗೂ ಈ ರಸ್ತೆಯಲ್ಲಿ ಸಮಸ್ಯೆಗಳು ಎದುರಾಗಿದೆ. ಆದುದರಿಂದ ತಾವುಗಳು ಈ ರಸ್ತೆಯನ್ನು ನಗರೋತ್ಥಾನ ಯೋಜನೆ ಅಥವಾ ಇತರ ಮೂಲಗಳಿಂದ ಅನುದಾನವನ್ನು ಒದಗಿಸಿ ಸರಿಪಡಿಸಲು ಕ್ರಮಕೈಗೊಳ್ಳಬೇಕಾಗಿ ತಮ್ಮಲ್ಲಿ ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ.
