
ಸುಬ್ರಹ್ಮಣ್ಯ: ರಾಜ್ಯದ ಹೆಸರಾಂತ ಯಾತ್ರಾ ಕ್ಷೇತ್ರವಾಗಿರುವ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾಹನ ಪಾರ್ಕಿಂಗ್ಗೆ ಪೇ ಪಾರ್ಕಿಂಗ್ ವ್ಯವಸ್ಥೆಯನ್ನು ದೇವಸ್ಥಾನದ ವತಿಯಿಂದ ಆರಂಭಿಸಲಾಗಿದೆ. ಟೆಂಡರ್ ಪ್ರಕ್ರಿಯೆ ನಡೆದು ಶನಿವಾರದಿಂದ ಈ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬಂದಿದೆ.


ಸುಬ್ರಹ್ಮಣ್ಯ ಪೇಟೆಯ ವಿವಿಧೆಡೆ ಪಾರ್ಕಿಂಗ್ಗೆ ಸ್ಥಳಗಳನ್ನು ಗುರುತಿಸಲಾಗಿದ್ದರೂ, ಕೆಲವೆಡೆ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿತ್ತು. ಕೆಲವು ವರ್ಷಗಳ ಹಿಂದೆ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಯಲ್ಲಿದ್ದರೂ ಬಳಿಕದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯದೆ ಇದ್ದುದರಿಂದ ಪೇ ಪಾರ್ಕಿಂಗ್ ವ್ಯವಸ್ಥೆ ಇರಲಿಲ್ಲ. ಇದೀಗ ಸುಬ್ರಹ್ಮಣ್ಯದಲ್ಲಿ ಮತ್ತೆ ವ್ಯವಸ್ಥೆ ಜಾರಿಯಾಗಿದೆ.
ಪಾರ್ಕಿಂಗ್ಗೆ ಸ್ಥಳಗಳ ಗುರುತು ಎಲ್ಲೆಲ್ಲಿ? :ಗುತ್ತಿಗೆ ಪಡೆದ ಕಡೂರು ಮೂಲದ ಸಂಸ್ಥೆಯವರು ಮುಂದಿನ ಒಂದು ವರ್ಷದ ವರೆಗೆ ಪಾರ್ಕಿಂಗ್ ವ್ಯವಸ್ಥೆಯನ್ನು ನಿರ್ವಹಣೆ ಮಾಡಲಿದ್ದಾರೆ. ಈ ಹಿಂದೆ ದೇವಸ್ಥಾನದಿಂದ ವಾಹನಗಳ ಪಾರ್ಕ್ ಮಾಡಲು ಗುರುತಿಸಲಾದ ಸ್ಥಳಗಳಾದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ರಸ್ತೆ ಬದಿ, ಸವಾರಿ ಮಂಟಪ ಬಳಿ, ರಥ ಬೀದಿ ಸಮೀಪದಲ್ಲಿ, ಬಂದಿಮಾಲು ಪ್ರದೇಶ, ಕಾಶಿಕಟ್ಟೆಬಳಿ ಮತ್ತಿತರ ಸ್ಥಳಗಳಲ್ಲಿ ವಾಹನ ಪಾರ್ಕಿಂಗ್ ಮಾಡಬಹುದಾಗಿದೆ. ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳು ಬಂದ ಕೂಡಲೇ ವ್ಯವಸ್ಥಿತವಾಗಿ ವಾಹನ ಪಾರ್ಕ್ ಮಾಡುವಂತೆ ಸಿಬಂದಿ ನಿರ್ದೇಶನ ನೀಡಿ, ಡಿಜಿಟಲ್ ರಶೀದಿ ನೀಡಿ ಶುಲ್ಕ ಪಡೆದುಕೊಳ್ಳುತ್ತಾರೆ.


ಈ ಸಂಸ್ಥೆ ಒಂದು ವರ್ಷದ ಅವಧಿಗೆ ಗುತ್ತಿಗೆ ಪಡೆದುಕೊಂಡು ರೂ. 88 ಲಕ್ಷ ಪಾವತಿಸಿದೆ ಎಂದು ಮೂಲವು ತಿಳಿಸಿದೆ.
ಪಾರ್ಕಿಂಗ್ ಶುಲ್ಕ
– ಕಾರು- ರೂ.25,
– ಟಿಟಿ ವಾಹನ ರೂ.30
– ಬಸ್ ಗಳಿಗೆ ರೂ.50
– ದ್ವಿಚಕ್ರ ವಾಹನಗಳಿಗೆ ಶುಲ್ಕ ಇಲ್ಲ
ಸುಬ್ರಹ್ಮಣ್ಯದಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಆರಂಭಗೊಂಡ ಕಾರಣ ಅಡ್ಡಾದಿಡ್ಡಿ ಪಾರ್ಕಿಂಗ್ಗೆ ಕಡಿವಾಣ ಬೀಳಲಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ತಿಳಿಸಿದ್ದಾರೆ.
