ಪ್ರೇಮ ವಿಚಾರಕ್ಕೆ ಯುವತಿಯ ಕಡೆಯವರಿಂದ ಹಲ್ಲೆ ಆರೋಪ|ಮನನೊಂದು ಜಿಲ್ಲಾಸ್ಪತ್ರೆಯಲ್ಲೇ ಸಂಘ ಪರಿವಾರದ ಕಾರ್ಯಕರ್ತ ಆತ್ಮಹತ್ಯೆ,

kadaba times

 ಪೆರ್ಡೂರು ನಾಯರ್‌ಕೋಡಿ ನಿವಾಸಿ ಪ್ರದೀಪ್ ಪೂಜಾರಿ (27) ಎಂಬ ಯುವಕ ಪ್ರೇಮದ ವಿಚಾರವಾಗಿ ಯುವತಿಯ ಕಡೆಯವರಿಂದ ಹಲ್ಲೆಗೊಳಗಾಗಿ, ಚಿಕಿತ್ಸೆಗಾಗಿ ದಾಖಲಾಗಿದ್ದ ಉಡುಪಿ ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲ್ಲೆ ಹಾಗೂ ಅವಮಾನದಿಂದ ಮನನೊಂದು ಈ ಕೃತ್ಯ ಎಸಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಯುವತಿ ಶ್ರಾವ್ಯಾ ಶೆಟ್ಟಿ ಹಾಗೂ ಆಕೆಯ ಕುಟುಂಬಸ್ಥರು ಸೇರಿದಂತೆ 10ಕ್ಕೂ ಹೆಚ್ಚು ಜನರ ವಿರುದ್ಧ  ಪ್ರಕರಣ ದಾಖಲಾಗಿದೆ.

kadaba times

ಪ್ರೇಮ ಪ್ರಕರಣದ ವೈಮನಸ್ಸಿನ ಹಿನ್ನೆಲೆಯಲ್ಲಿ ಯುವತಿಯ ಕಡೆಯವರಿಂದ ಬಲವಂತವಾಗಿ ಅಪಹರಣಕ್ಕೊಳಗಾಗಿ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಸಂಘ ಪರಿವಾರದ ಕಾರ್ಯಕರ್ತ, ಪೆರ್ಡೂರು ನಿವಾಸಿ ಪ್ರದೀಪ್ ಪೂಜಾರಿ (27) ಅವರು ಚಿಕಿತ್ಸೆ ಪಡೆಯುತ್ತಿದ್ದ ಉಡುಪಿ ಜಿಲ್ಲಾಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ತೀವ್ರ ಸಂಚಲನ ಮೂಡಿಸಿದೆ.

ಮೃತರನ್ನು ಪೆರ್ಡೂರು ಗ್ರಾಮದ ನಾಯರ್‌ಕೋಡಿ ನಿವಾಸಿ ಪ್ರದೀಪ್ ಪೂಜಾರಿ (27) ಎಂದು ಗುರುತಿಸಲಾಗಿದೆ.

ರಸ್ತೆಯಲ್ಲಿ ಅಡ್ಡಗಟ್ಟಿ, ಮನೆಗೆ ಕರೆದೊಯ್ದು ದೊಣ್ಣೆಗಳಿಂದ ಹಲ್ಲೆ: ದೂರಿನ ವಿವರಗಳ ಪ್ರಕಾರ, ಪ್ರದೀಪ್ ಪೂಜಾರಿ ಹಾಗೂ ಶ್ರಾವ್ಯಾ ಶೆಟ್ಟಿ ಎಂಬ ಯುವತಿಯ ನಡುವೆ ಕಳೆದ ಎಂಟು ವರ್ಷಗಳಿಂದ ಪ್ರೇಮ ಸಂಬಂಧವಿತ್ತೆನ್ನಲಾಗಿದೆ. ಆದರೆ ಇತ್ತೀಚೆಗೆ ಇವರ ನಡುವೆ ತೀವ್ರ ಭಿನ್ನಾಭಿಪ್ರಾಯ ಉಂಟಾಗಿತ್ತು.

kadaba times

ಅಕ್ಟೋಬರ್ 27ರಂದು ರಾತ್ರಿ ಪ್ರದೀಪ್ ಪೂಜಾರಿ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕಾರುಗಳಲ್ಲಿ ಆಗಮಿಸಿದ ಶ್ರಾವ್ಯಾ ಶೆಟ್ಟಿಯ ಸಹೋದರರಾದ ಪ್ರಸನ್ನ ಶೆಟ್ಟಿ, ಸುಧೀರ್ ಶೆಟ್ಟಿ, ಶೈಲೇಶ್ ಶೆಟ್ಟಿ, ಸನತ್, ಕೃಷ್ಣ, ಸುಜಯ್ ಮತ್ತು ಇತರರು ಪ್ರದೀಪ್‌ನನ್ನು ಬಲವಂತವಾಗಿ ತಮ್ಮ ಮನೆಗೆ ಎಳೆದೊಯ್ದಿದ್ದಾರೆ. ಅಲ್ಲಿ ಆತನಿಗೆ ಬೆತ್ತ ಹಾಗೂ ಮರದ ದೊಣ್ಣೆಗಳಿಂದ ಅಮಾನವೀಯವಾಗಿ ಥಳಿಸಿ ಗಾಯಗೊಳಿಸಿದ್ದರು ಎಂದು ಆರೋಪಿಸಲಾಗಿದೆ.

ಜಿಲ್ಲಾಸ್ಪತ್ರೆ ಶೌಚಾಲಯದಲ್ಲಿ ನೇಣಿಗೆ ಶರಣು: ಮಾರಣಾಂತಿಕ ಹಲ್ಲೆಯಿಂದ ಗಾಯಗೊಂಡಿದ್ದ ಪ್ರದೀಪ್ ಅಕ್ಟೋಬರ್ 28ರಂದು ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ತನ್ನ ಮೇಲೆ ನಡೆದ ಭೀಕರ ಹಲ್ಲೆ ಮತ್ತು ಸಾರ್ವಜನಿಕವಾಗಿ ಆದ ತೀವ್ರ ಅವಮಾನದಿಂದ ಮಾನಸಿಕವಾಗಿ ಜರ್ಜರಿತರಾಗಿದ್ದ ಪ್ರದೀಪ್, ಅಕ್ಟೋಬರ್ 30ರಂದು ಸಂಜೆ ಸುಮಾರು 5:30ರ ವೇಳೆಗೆ ಜಿಲ್ಲಾಸ್ಪತ್ರೆಯ ವಾರ್ಡ್ ಶೌಚಾಲಯದೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

uniq

ಆತ್ಮಹತ್ಯೆ ಪ್ರಚೋದನೆ: 10ಕ್ಕೂ ಹೆಚ್ಚು ಮಂದಿ ವಿರುದ್ಧ FIR: ತನ್ನ ಸಹೋದರನ ಸಾವಿಗೆ ಯುವತಿ ಹಾಗೂ ಆಕೆಯ ಕುಟುಂಬಸ್ಥರ ನಿರಂತರ ದೌರ್ಜನ್ಯ ಮತ್ತು ಪ್ರಚೋದನೆಯೇ ನೇರ ಕಾರಣವೆಂದು ಆರೋಪಿಸಿ ಮೃತನ ಸಹೋದರ ದಿಲೀಪ್ ಕುಮಾರ್ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನನ್ವಯ ಶ್ರಾವ್ಯಾ ಶೆಟ್ಟಿ, ಪ್ರಸನ್ನ ಶೆಟ್ಟಿ, ಸುಧೀರ್, ಶೈಲೇಶ್, ಶಶಾಂಕ್, ಕೃಷ್ಣ, ಸುಜಯ, ಸನತ್, ಹೊರ ರಾಜ್ಯದ ಇಬ್ಬರು ಕಾರ್ಮಿಕರು ಹಾಗೂ ಇತರರ ವಿರುದ್ಧ ಉಡುಪಿ ನಗರ ಠಾಣೆಯ ಪೊಲೀಸರು ಆತ್ಮಹತ್ಯೆ ಪ್ರಚೋದನೆ ಸೇರಿದಂತೆ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ಹಿಂದೆ ಬಂಧನಕ್ಕೊಳಗಾಗಿದ್ದ ಪ್ರದೀಪ್: ಮೃತ ಪ್ರದೀಪ್ ಪೂಜಾರಿ ವಿರುದ್ಧ ಈ ಹಿಂದೆಯೂ ಕಾನೂನು ಪ್ರಕರಣಗಳು ದಾಖಲಾಗಿದ್ದವು. ಮದುವೆಯಾಗುವಂತೆ ತನಗೆ ನಿರಂತರ ಕಿರುಕುಳ ನೀಡುತ್ತಿದ್ದಾನೆ ಎಂದು ಶ್ರಾವ್ಯಾ ಶೆಟ್ಟಿ ನೀಡಿದ ದೂರಿನ ಮೇರೆಗೆ ಈ ಹಿಂದೆ ಹಿರಿಯಡ್ಕ ಠಾಣಾ ಪೊಲೀಸರು ಆತನನ್ನು ಬಂಧಿಸಿದ್ದರು.

ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದ ಪ್ರದೀಪ್, ಅದೇ ದ್ವೇಷದಲ್ಲಿ 2025ರ ನವೆಂಬರ್‌ನಲ್ಲಿ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆಕೆ ದೂರು ನೀಡಿದ್ದರು. ಈ ಸಂಬಂಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿ ಆತನನ್ನು ಮತ್ತೆ ಬಂಧಿಸಲಾಗಿತ್ತು. ಇದೀಗ ಅದೇ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಯುವತಿಯ ಕುಟುಂಬಸ್ಥರು ಹಲ್ಲೆ ನಡೆಸಿದ್ದು, ಅಂತಿಮವಾಗಿ ಘಟನೆ ಯುವಕನ ಆತ್ಮಹತ್ಯೆಯಲ್ಲಿ ಅಂತ್ಯಗೊಂಡಿದೆ.

Related Articles

Latest Articles