5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮುಂಬೈನ ಸರಣಿ ಕಳ್ಳತನದ ಆರೋಪಿ

kadaba times

ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2016ರಲ್ಲಿ ನಡೆದಿದ್ದ ಸರಣಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮುಂಬೈ ಮೂಲದ ಕುಖ್ಯಾತ ಆರೋಪಿ ವಿಶಾಲ್ ಪೊಂಕೆ (30) ಎಂಬಾತನನ್ನು ಪುತ್ತೂರು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕೋರ್ಟ್ ಹೊರಡಿಸಿದ್ದ ಜಾಮೀನು ರಹಿತ ವಾರಂಟ್ (NBW) ಅನ್ನು ರೀ-ಕಾಲ್ ಮಾಡಿಸಿಕೊಳ್ಳಲು ವಕೀಲರೊಂದಿಗೆ ಕೋರ್ಟ್‌ಗೆ ಹಾಜರಾಗಿದ್ದ ಆರೋಪಿಯ ಅರ್ಜಿಯನ್ನು ಪುತ್ತೂರಿನ 2ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ತಿರಸ್ಕರಿಸಿದೆ.

kadaba times

ಕಡಬ / ಪುತ್ತೂರು: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2016ರಲ್ಲಿ ಸರಣಿ ಮನೆಗಳ್ಳತನ ಹಾಗೂ ಕಳವು ಕೃತ್ಯಗಳನ್ನು ಎಸಗಿ, ಕಳೆದ ಐದು ವರ್ಷಗಳಿಂದ ಪೊಲೀಸರು ಹಾಗೂ ನ್ಯಾಯಾಲಯದ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ಮುಂಬೈ ಮೂಲದ ಅಂತಾರಾಜ್ಯ ಕಳ್ಳನೋರ್ವ ಕೊನೆಗೂ ಕಂಬಿ ಎಣಿಸುವಂತಾಗಿದೆ. ನ್ಯಾಯಾಲಯ ಹೊರಡಿಸಿದ್ದ ಬಂಧನ ವಾರಂಟ್‌ನಿಂದ ಪಾರಾಗಲು ವಕೀಲರೊಂದಿಗೆ ಕೋರ್ಟ್‌ಗೆ ಹಾಜರಾಗಿದ್ದ ಆರೋಪಿಯ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಧೀಶರು, ಆತನನ್ನು ನೇರವಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.

ನ್ಯಾಯಾಂಗ ಬಂಧನಕ್ಕೆ ಒಳಗಾದ ಆರೋಪಿಯನ್ನು ಮಹಾರಾಷ್ಟ್ರ ರಾಜ್ಯದ ವೆಸ್ಟ್ ಮುಂಬೈ, ಥಾಣೆಯ ಲೋಕಮಾನ್ಯ ನಗರ ನಿವಾಸಿ ವಿಶಾಲ್ ಪೊಂಕೆ (30) ಎಂದು ಗುರುತಿಸಲಾಗಿದೆ.

ಕಡಬದಲ್ಲಿ 4 ಸರಣಿ ಕಳವು ಪ್ರಕರಣಗಳು – ನಾಲ್ವರಿಗೆ ಈಗಾಗಲೇ ಶಿಕ್ಷೆ:2016ರಲ್ಲಿ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಅ.ಕ್ರ: 110/2016 (CC: 204/17), ಅ.ಕ್ರ: 112/2016 (CC: 205/17), ಅ.ಕ್ರ: 113/2016 (CC: 206/17) ಹಾಗೂ ಅ.ಕ್ರ: 114/2016 (CC: 207/17) ರಲ್ಲಿ ಐಪಿಸಿ ಕಲಂ 457 (ರಾತ್ರಿ ವೇಳೆ ಅಕ್ರಮ ಮನೆ ಪ್ರವೇಶ) ಹಾಗೂ 380 (ಮನೆ ಕಳವು) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

kadaba times

ಈ ಸರಣಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ದೊಡ್ಡಬಳ್ಳಾಪುರದ ನರಸಿಂಹ ಅಲಿಯಾಸ್ ರಾಜು (A1), ಮಹಾರಾಷ್ಟ್ರದ ವಿಜಯ್ ಸುರೇಶ್ ಪೊಂಕೆ (A2), ನವೀನ್ ಚಂದ್ರ ಸಿಂಗ್ (A3) ಹಾಗೂ ಉತ್ತರ ಕನ್ನಡದ ಚಂದ್ರಕಾಂತ್ ಪೂಜಾರಿ (A4) ಎಂಬ ನಾಲ್ವರು ಆರೋಪಿಗಳನ್ನು ಪುತ್ತೂರು ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬಾಡಿ ವಾರಂಟ್ ಮೂಲಕ ಹಾಜರುಪಡಿಸಲಾಗಿತ್ತು. ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರಿಂದ ನ್ಯಾಯಾಲಯವು ಈ ನಾಲ್ವರಿಗೂ ಈಗಾಗಲೇ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಮತ್ತೋರ್ವ ಆರೋಪಿ ಪ್ರಕಾಶ್ ಬಹದ್ದೂರ್ ಸಾವನ್ನಪ್ಪಿದ್ದರಿಂದ ಆತನ ವಿರುದ್ಧದ ಕೇಸ್ ಮುಕ್ತಾಯಗೊಂಡಿತ್ತು (Abated).

5 ವರ್ಷಗಳಿಂದ ಕೋರ್ಟ್‌ಗೆ ಹಾಜರಾಗದೆ ಚಳ್ಳೆಹಣ್ಣು : ಮುಂಬೈಗೆ ತೆರಳಿ ಪ್ರೊಕ್ಲಮೇಷನ್ ಜಾರಿ:ಆದರೆ, ಪ್ರಕರಣದ 5ನೇ ಆರೋಪಿಯಾಗಿದ್ದ (A5) ಮುಂಬೈನ ವಿಶಾಲ್ ಪೊಂಕೆ ಕಳೆದ 5 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಪ್ರಕರಣವನ್ನು ಪುತ್ತೂರಿನ 2ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದ್ದು, ಸಿಸಿ ನಂಬರ್ 658/18, 659/18, 660/18 ಹಾಗೂ 664/18 ರಂತೆ ದಾಖಲಿಸಿಕೊಂಡು ಹಲವು ಬಾರಿ ದಸ್ತಗಿರಿ ವಾರಂಟ್ (NBW) ಹೊರಡಿಸಲಾಗಿತ್ತು.

uniq

ಆರೋಪಿ ಸಿಗದೇ ಇದ್ದುದರಿಂದ ನ್ಯಾಯಾಲಯವು ಆತನ ವಿರುದ್ಧ ಪ್ರಕಟಣೆ (Proclamation) ಹೊರಡಿಸಿತ್ತು. ಇದರನ್ವಯ ಕಡಬ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ಹಾಗೂ ಸಿಬ್ಬಂದಿ ಮುಂಬೈಗೆ ತೆರಳಿ ಆರೋಪಿಯ ವಿಳಾಸಕ್ಕೆ ಪ್ರೊಕ್ಲಮೇಷನ್ ಜಾರಿಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಆರೋಪಿಯ ಆಸ್ತಿಪಾಸ್ತಿ ಮುಟ್ಟುಗೋಲು (Property Details) ಪ್ರಕ್ರಿಯೆಯೂ ಪ್ರಗತಿಯಲ್ಲಿದೆ.

ವಾರಂಟ್ ರೀ-ಕಾಲ್ ಅರ್ಜಿ ತಿರಸ್ಕರಿಸಿ ಜೈಲಿಗಟ್ಟಿದ ಕೋರ್ಟ್:ಪೊಲೀಸರ ಬಿಗಿ ತನಿಖೆ ಹಾಗೂ ಆಸ್ತಿ ಮುಟ್ಟುಗೋಲಿನ ಭೀತಿಯಿಂದ ಕಂಗೆಟ್ಟ ಆರೋಪಿ ವಿಶಾಲ್ ಪೊಂಕೆ, ಅಕ್ಟೋಬರ್ 30ರಂದು ಪುತ್ತೂರಿನ 2ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ (ಸಂಚಾರಿ ನ್ಯಾಯಾಲಯ ಕಡಬ) ತನ್ನ ವಕೀಲರೊಂದಿಗೆ ಖುದ್ದು ಹಾಜರಾಗಿ, ತನ್ನ ವಿರುದ್ಧವಿರುವ ವಾರಂಟ್ ಅನ್ನು ರದ್ದುಗೊಳಿಸುವಂತೆ (Recall) ಅರ್ಜಿ ಸಲ್ಲಿಸಿದ್ದನು.

ಆದರೆ, 5 ವರ್ಷಗಳಿಂದ ಕಾನೂನಿನಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಆರೋಪಿಯ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ ನ್ಯಾಯಾಲಯವು ಆತನ ವಾರಂಟ್ ರೀ-ಕಾಲ್ ಅರ್ಜಿಯನ್ನು ಸಾರಾಸಗಟಾಗಿ ತಿರಸ್ಕರಿಸಿ, ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ಕಾರಾಗೃಹಕ್ಕೆ ಕಳುಹಿಸಿದೆ. ಕಡಬ ಪೊಲೀಸರು ಆರೋಪಿಯ ವಿರುದ್ಧ ಎಂಒಬಿ (MOB Sheet – Modus Operandi Bureau) ಹಳೆಯನ್ನೂ ತೆರೆದಿದ್ದಾರೆ.

ಪುತ್ತೂರು ಗ್ರಾಮಾಂತರ ಠಾಣೆಯಲ್ಲೂ ಕಳವು ಕೇಸ್ ಬಾಕಿ: ವಿಶಾಲ್ ಪೊಂಕೆ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲೂ 2016ರ ಕಳವು ಪ್ರಕರಣವೊಂದು ಬಾಕಿ ಇದೆ (ಅ.ಕ್ರ: 105/2016, ಕಲಂ: 457, 380 IPC, CC NO: 1933/2017). ಈ ಪ್ರಕರಣದ ನ್ಯಾಯಾಲಯ ವಿಚಾರಣೆಯು ನವೆಂಬರ್ 3, 2026 ರಂದು ನಿಗದಿಯಾಗಿದ್ದು, ಅಂದೂ ಸಹ ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ.

Related Articles

Latest Articles