ಸೌಜನ್ಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ತಿಮರೋಡಿಗೆ ಬಿಗ್ ಶಾಕ್: ಗಡಿಪಾರು ಆದೇಶ ಎತ್ತಿಹಿಡಿದ ಗೃಹ ಇಲಾಖೆ

kadaba times

ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದಡಿ ಉಜಿರೆಯ ಸಾಮಾಜಿಕ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ (AC) ಸ್ಟೆಲ್ಲಾ ವರ್ಗೀಸ್ ಹೊರಡಿಸಿದ್ದ ಆದೇಶವನ್ನು ರಾಜ್ಯ ಗೃಹ ಇಲಾಖೆಯ ಅಪೀಲು ಪ್ರಾಧಿಕಾರ ಸಂಪೂರ್ಣವಾಗಿ ಎತ್ತಿಹಿಡಿದಿದೆ. ಗಡಿಪಾರು ಆದೇಶವನ್ನು ರದ್ದುಗೊಳಿಸುವಂತೆ ಕೋರಿ ತಿಮರೋಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸಕ್ಷಮ ಪ್ರಾಧಿಕಾರವು ಸಾರಾಸಗಟಾಗಿ ತಿರಸ್ಕರಿಸಿದೆ.

kadaba times

ಮಂಗಳೂರು / ಬೆಂಗಳೂರು:ಉಜಿರೆ ನಿವಾಸಿ, ಪ್ರಜಾಪ್ರಭುತ್ವ ವೇದಿಕೆಯ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ರಾಜ್ಯ ಗೃಹ ಇಲಾಖೆಯಿಂದ ಭಾರೀ ಕಾನೂನಾತ್ಮಕ ಹಿನ್ನಡೆಯಾಗಿದೆ. ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆಗೆ ಭಂಗ ತಂದ ಆರೋಪದ ಹಿನ್ನೆಲೆಯಲ್ಲಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಗೃಹ ಇಲಾಖೆಯ ಶಾಸನಬದ್ಧ ಅಪೀಲು ಪ್ರಾಧಿಕಾರವು ದೃಢಪಡಿಸಿದೆ.

ಕರ್ನಾಟಕ ಪೊಲೀಸ್ ಕಾಯ್ದೆ 1963ರ ಸೆಕ್ಷನ್ 59ರ ಅಡಿಯಲ್ಲಿ ಸಕ್ಷಮ ಪ್ರಾಧಿಕಾರವಾಗಿರುವ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಈ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.

ಪುತ್ತೂರು ಎಸಿ ಆದೇಶದಲ್ಲಿ ಯಾವುದೇ ಲೋಪವಿಲ್ಲ:ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು 2026ರ ಮಾರ್ಚ್ 13ರಂದು ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಅಧಿಕೃತ ಆದೇಶ ಹೊರಡಿಸಿದ್ದರು.

kadaba times

ಈ ಆದೇಶವನ್ನು ಪ್ರಶ್ನಿಸಿ ತಿಮರೋಡಿ ಅವರು ಹೈಕೋರ್ಟ್ ಏಕಸದಸ್ಯ ಪೀಠ, ನಂತರ ಹೈಕೋರ್ಟ್ ವಿಭಾಗೀಯ ಪೀಠ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಉನ್ನತ ನ್ಯಾಯಾಲಯಗಳು ಮಧ್ಯಪ್ರವೇಶಿಸಲು ನಿರಾಕರಿಸಿ, ಶಾಸನಬದ್ಧ ಪ್ರಾಧಿಕಾರವಾದ ಗೃಹ ಇಲಾಖೆಯಲ್ಲೇ ಮೇಲ್ಮನವಿ ಸಲ್ಲಿಸುವಂತೆ ಸೂಚಿಸಿ ಅರ್ಜಿಗಳನ್ನು ವಜಾಗೊಳಿಸಿದ್ದವು.

ಅರ್ಜಿ ತಿರಸ್ಕರಿಸಲು ಗೃಹ ಇಲಾಖೆ ನೀಡಿದ ಪ್ರಮುಖ ಕಾರಣಗಳು:ನ್ಯಾಯಾಲಯಗಳ ನಿರ್ದೇಶನದಂತೆ ತಿಮರೋಡಿ ಅವರು ಗೃಹ ಇಲಾಖೆಗೆ ಮೇಲ್ಮನವಿ ಸಲ್ಲಿಸಿ, “ತಮಗೆ ವಾದ ಮಂಡಿಸಲು ಸೂಕ್ತ ಕಾಲಾವಕಾಶ ನೀಡಿಲ್ಲ ಹಾಗೂ ಕುಟುಂಬ ನಿರ್ವಹಣೆಗೆ ತಾವೇ ಆಧಾರ” ಎಂದು ಪ್ರತಿಪಾದಿಸಿದ್ದರು. ಆದರೆ ಪೊಲೀಸ್ ಉಪಾಧೀಕ್ಷಕರ (DySP) ವರದಿ ಹಾಗೂ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿದ ಗೃಹ ಇಲಾಖೆ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿ ಅರ್ಜಿಯನ್ನು ತಿರಸ್ಕರಿಸಿದೆ:

  • ಗಂಭೀರ ಅಪರಾಧ ಪ್ರಕರಣಗಳು: ಆರೋಪಿ ವಿರುದ್ಧ ಕೊಲೆ ಯತ್ನ, ದೊಂಬಿ, ಹಲ್ಲೆ, ಸುಲಿಗೆ ಸೇರಿದಂತೆ ಸಾರ್ವಜನಿಕ ಶಾಂತಿಗೆ ಭಂಗ ತರುವ ಹಲವಾರು ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

    uniq
  • ಪ್ರಕ್ರಿಯೆಯ ನಡುವೆಯೂ ಹೊಸ ಕೇಸ್: ಗಡಿಪಾರು ಪ್ರಕ್ರಿಯೆಯ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲೂ ಹಾಗೂ ಆದೇಶ ಹೊರಬಿದ್ದ ಬಳಿಕವೂ ಅವರ ವಿರುದ್ಧ ಹೊಸ ಪ್ರಕರಣಗಳು ದಾಖಲಾಗಿರುವುದು ಕಂಡುಬಂದಿದೆ.

  • ಮುನ್ನೆಚ್ಚರಿಕಾ ಕ್ರಮ: ಗಡಿಪಾರು ಕ್ರಮವು ಯಾವುದೇ ವ್ಯಕ್ತಿಗೆ ನೀಡುವ ದಂಡನಾತ್ಮಕ ಶಿಕ್ಷೆಯಲ್ಲ, ಬದಲಿಗೆ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆ ಕಾಪಾಡಲು ಕೈಗೊಳ್ಳುವ ಮುನ್ನೆಚ್ಚರಿಕಾ ಕ್ರಮವಾಗಿದೆ.

  • ಸೂಕ್ತ ಅವಕಾಶ ನೀಡಲಾಗಿದೆ: ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆಗೆ ಅಗತ್ಯ ಕಾಲಾವಕಾಶ ನೀಡಲಾಗಿದ್ದು, ಪ್ರಕ್ರಿಯೆಯಲ್ಲಿ ಯಾವುದೇ ನಿಯಮಬಾಹಿರತೆ ಕಂಡುಬಂದಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಜಿಲ್ಲೆ ಬಿಟ್ಟು ಮಾನ್ವಿಗೆ ತೆರಳಲು ಸೂಚನೆ – ಉಲ್ಲಂಘಿಸಿದರೆ ತಕ್ಷಣ ಬಂಧನ: ಗೃಹ ಇಲಾಖೆಯ ಅಪೀಲು ಪ್ರಾಧಿಕಾರವು ಗಡಿಪಾರು ಆದೇಶವನ್ನು ಅಂತಿಮಗೊಳಿಸಿರುವುದರಿಂದ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ವಿಳಂಬವಿಲ್ಲದೆ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಆದೇಶದ ಪ್ರತಿಯನ್ನು ಜಾರಿಗೊಳಿಸಲಿದ್ದಾರೆ. ಆದೇಶ ಜಾರಿಯಾದ ತಕ್ಷಣ ಅವರು ನಿಗದಿತ ಗಡುವಿನೊಳಗೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿಯನ್ನು ತೊರೆದು, ನಿಗದಿಪಡಿಸಲಾದ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ವಾಸಿಸಬೇಕಾಗುತ್ತದೆ.

ಒಂದು ವೇಳೆ ಅವರು ಆದೇಶವನ್ನು ಉಲ್ಲಂಘಿಸಿ ಜಿಲ್ಲೆಯಲ್ಲೇ ಉಳಿದುಕೊಂಡರೆ ಅಥವಾ ಅನುಮತಿಯಿಲ್ಲದೆ ಮರಳಿ ಜಿಲ್ಲೆಯನ್ನು ಪ್ರವೇಶಿಸಿದರೆ, ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 61ರ ಅಡಿಯಲ್ಲಿ ಪೊಲೀಸರು ಯಾವುದೇ ವಾರಂಟ್ ಇಲ್ಲದೆಯೇ ಅವರನ್ನು ತಕ್ಷಣವೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಅಧಿಕಾರ ಹೊಂದಿರುತ್ತಾರೆ.

Related Articles

Latest Articles