ಎಡಮಂಗಲದ ಯುವತಿ ನಾಪತ್ತೆ; ಮಾಹಿತಿ ನೀಡಲು ಬೆಳ್ಳಾರೆ ಪೊಲೀಸರ ಮನವಿ

kadaba times

 ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಮಂಗಲ ಗ್ರಾಮದ ಯುವತಿ ಅಕ್ಟೋಬರ್ 13ರಂದು ಕೆಲಸಕ್ಕೆಂದು ತೆರಳಿದವರು ಮನೆಗೂ ಮರಳದೆ, ಕಾರ್ಯಸ್ಥಳಕ್ಕೂ ತಲುಪದೆ ಕಾಣೆಯಾಗಿದ್ದಾರೆ. ಈ ಸಂಬಂಧ ಯುವತಿಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಯುವತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಸಾರ್ವಜನಿಕರು ಪೊಲೀಸರಿಗೆ ತಿಳಿಸುವಂತೆ ಕೋರಲಾಗಿದೆ.

kadaba times

ಬೆಳ್ಳಾರೆ / ಕಡಬ:ಕಡಬ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಮಂಗಲ ಗ್ರಾಮದ ಯುವತಿಯೊಬ್ಬರು ಮಂಗಳೂರಿಗೆ ಕೆಲಸಕ್ಕೆಂದು ತೆರಳಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ನಾಪತ್ತೆಯಾದ ಯುವತಿಯನ್ನು ಎಡಮಂಗಲ ಗ್ರಾಮದ ನಿವಾಸಿ ವಸಂತಿ (26) ಎಂದು ಗುರುತಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಯುವತಿಯ ಕುಟುಂಬಸ್ಥರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತ್ತೆ ಕಾರ್ಯ ಆರಂಭಿಸಿದ್ದಾರೆ.

ಕೆಲಸಕ್ಕೆ ಹೋದವರು ಕಂಪನಿಗೂ ತಲುಪಿಲ್ಲ: ಪೊಲೀಸ್ ಠಾಣೆಗೆ ಸಲ್ಲಿಕೆಯಾಗಿರುವ ದೂರಿನ ವಿವರಗಳ ಪ್ರಕಾರ,ಯುವತಿ  ಕಳೆದ ಎರಡು ವರ್ಷಗಳಿಂದ ಮಂಗಳೂರಿನ ಕೆಎಫ್‌ಡಿಸಿ (KFDC) ಫಿಶ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಕಂಪನಿಯ ವಸತಿ ಗೃಹದಲ್ಲೇ (ರೂಮ್) ಉಳಿದುಕೊಂಡಿದ್ದರು. ಸಾಮಾನ್ಯವಾಗಿ ತಿಂಗಳಿಗೊಮ್ಮೆ ಊರಿಗೆ ಬಂದು ಹೋಗುತ್ತಿದ್ದ ಅವರು, ಅಕ್ಟೋಬರ್ 10ರಂದು ರಜೆಯ ನಿಮಿತ್ತ ಎಡಮಂಗಲದ ತಮ್ಮ ಮನೆಗೆ ಬಂದಿದ್ದರು.ಬಳಿಕ ಅಕ್ಟೋಬರ್ 13ರಂದು ಬೆಳಿಗ್ಗೆ ಎಂದಿನಂತೆ ಮಂಗಳೂರಿಗೆ ಕರ್ತವ್ಯಕ್ಕೆ ಹಾಜರಾಗುವುದಾಗಿ ಮನೆಯಲ್ಲಿ ತಿಳಿಸಿ ಹೊರಟಿದ್ದರು.

kadaba times
uniq

ಅಕ್ಟೋಬರ್ 27ರಂದು ಮನೆಯವರು ವಸಂತಿ ಅವರಿಗೆ ಮೊಬೈಲ್ ಮೂಲಕ ಸಂಪರ್ಕಿಸಲು ಯತ್ನಿಸಿದಾಗ ಆಕೆಯ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಮಂಗಳೂರಿನಲ್ಲಿರುವ ಕಂಪನಿಗೆ ಖುದ್ದು ತೆರಳಿ ವಿಚಾರಿಸಿದ್ದಾರೆ. ಈ ವೇಳೆ ಕಂಪನಿಯ ಸೂಪರ್‌ವೈಸರ್, “ವಸಂತಿ ಅವರು ಅಕ್ಟೋಬರ್ 10ರಂದು ರಜೆ ಪಡೆದು ಊರಿಗೆ ತೆರಳಿದ ನಂತರ ಇದುವರೆಗೂ ಕೆಲಸಕ್ಕೆ ಹಾಜರಾಗಿಲ್ಲ” ಎಂಬ ಆಘಾತಕಾರಿ ಮಾಹಿತಿ ನೀಡಿದ್ದಾರೆ.

ಮಂಗಳೂರಿಗೂ ತಲುಪದೆ, ಮನೆಗೂ ಮರಳದೆ ಯುವತಿ ನಾಪತ್ತೆಯಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕುಟುಂಬಸ್ಥರು ತಕ್ಷಣವೇ ಬೆಳ್ಳಾರೆ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿದ್ದಾರೆ.

ಸುಳಿವು ಲಭ್ಯವಾದರೆ ಮಾಹಿತಿ ನೀಡಲು ಪೊಲೀಸರ ಮನವಿ: ಯುವತಿಯ ನಾಪತ್ತೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳಾರೆ ಠಾಣಾ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಭಾವಚಿತ್ರ ಹಾಗೂ ವಿವರಗಳನ್ನು ಬಿಡುಗಡೆಗೊಳಿಸಿದ್ದಾರೆ. ಕಾಣೆಯಾಗಿರುವ ಯುವತಿಯ ಬಗ್ಗೆ ಯಾವುದೇ ಸುಳಿವು ಅಥವಾ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಬೆಳ್ಳಾರೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ವಿನಂತಿಸಿದೆ.

Related Articles

Latest Articles