ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಕಡಬದ ರೌಡಿಶೀಟರ್ ಗೆ 20 ವರ್ಷ ಕಠಿಣ ಜೈಲು ಶಿಕ್ಷೆ

kadaba times

ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019ರಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಪುತ್ತೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯವು ಆರೋಪಿ, ಕಡಬ ನೂಜಿಬಾಳ್ತಿಲ ನಿವಾಸಿ ರೌಡಿಶೀಟರ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದು, 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹75,000 ದಂಡ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.

kadaba times

ಕಡಬ / ಪುತ್ತೂರು: ಅಪ್ರಾಪ್ತ ಬಾಲಕಿಯೊಬ್ಬಳ ಮನೆಗೆ ಅಕ್ರಮವಾಗಿ ನುಗ್ಗಿ ಆಕೆಯ ಇಷ್ಟಕ್ಕೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಎಸಗಿದ್ದ ಹೇಯ ಪ್ರಕರಣದಲ್ಲಿ ಕಡಬ ಠಾಣೆಯ ರೌಡಿಶೀಟರ್‌ಗೆ ನ್ಯಾಯಾಲಯವು ಗರಿಷ್ಠ ಶಿಕ್ಷೆ ಪ್ರಕಟಿಸಿದೆ. ಆರೋಪಿಯ ವಿರುದ್ಧದ ಎಲ್ಲಾ ದೋಷಾರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಬರೋಬ್ಬರಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.

ಶಿಕ್ಷೆಗೆ ಗುರಿಯಾದ ಅಪರಾಧಿಯನ್ನು ಕಡಬ ತಾಲೂಕಿನ ನೂಜಿಬಾಳ್ತಿಲ ನಿವಾಸಿ, ರೌಡಿಶೀಟರ್ ಸದ್ದಾಂ (34) ಎಂದು ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆ :2019ರಲ್ಲಿ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಮಾನವೀಯ ಕೃತ್ಯ ನಡೆದಿತ್ತು. ಆರೋಪಿ ಸದ್ದಾಂ ಅಪ್ರಾಪ್ತ ಬಾಲಕಿಯ ಮನೆಗೆ ತೆರಳಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯವೆಸಗಿ ಜೀವಬೆದರಿಕೆಯೊಡ್ಡಿದ್ದ. ಈ ಕುರಿತು ಸಂತ್ರಸ್ತೆಯ ಕಡೆಯವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 24/2019, ಕಲಂ: 376(2)(n), 376(3), 506 ಐಪಿಸಿ ಹಾಗೂ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

kadaba times

ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಅಂದಿನ ಉಪ್ಪಿನಂಗಡಿ ವೃತ್ತ ನಿರೀಕ್ಷಕರಾದ (ಸಿಪಿಐ) ನಾಗೇಶ್ ಕೆ. ಅವರು ಸಮಗ್ರ ವಿಚಾರಣೆ ನಡೆಸಿ, ಪ್ರಬಲ ಸಾಕ್ಷ್ಯಗಳನ್ನು ಕಲೆಹಾಕಿ ಆರೋಪಿ ಸದ್ದಾಂ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು.

ನ್ಯಾಯಾಲಯದ ಕಠಿಣ ತೀರ್ಪು ಮತ್ತು ಶಿಕ್ಷೆಯ ವಿವರ: ಮಂಗಳೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಕಾರ್ಯ ನಿರ್ವಹಣೆ: ಪುತ್ತೂರು) ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಸುಮಂಗಲಾ ಚಕಲಬ್ಬಿ ಅವರು ಪ್ರಕರಣದ ಸಮಗ್ರ ವಿಚಾರಣೆ ನಡೆಸಿದರು. ಸರ್ಕಾರದ ಪರ ವಾದ ಮತ್ತು ಸಾಕ್ಷ್ಯಾಧಾರಗಳನ್ನು ಪುರಸ್ಕರಿಸಿದ ನ್ಯಾಯಾಲಯವು ಆರೋಪಿಗೆ ಕೆಳಗಿನಂತೆ ಶಿಕ್ಷೆ ಪ್ರಕಟಿಸಿದೆ:

uniq
  • ಪೋಕ್ಸೋ ಕಾಯ್ದೆಯ ಕಲಂ 5(l) ಮತ್ತು 5(j)(ii) r/w 6 ರ ಅಡಿಯಲ್ಲಿ: 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹50,000 ದಂಡ. ದಂಡ ಪಾವತಿಸಲು ತಪ್ಪಿದ್ದಲ್ಲಿ ಹೆಚ್ಚುವರಿಯಾಗಿ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ.

  • ಐಪಿಸಿ ಕಲಂ 506 (ಪ್ರಾಣಬೆದರಿಕೆ) ಅಡಿಯಲ್ಲಿ: 1 ವರ್ಷದ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹25,000 ದಂಡ. ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ.

ಈ ಎರಡೂ ಶಿಕ್ಷೆಗಳು ಏಕಕಾಲದಲ್ಲಿ (Concurrently) ಜಾರಿಯಲ್ಲಿರುತ್ತವೆ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಶೀಟರ್: ಶಿಕ್ಷೆಗೆ ಗುರಿಯಾಗಿರುವ ಆರೋಪಿ ಸದ್ದಾಂ ಕಡಬ ಪೊಲೀಸ್ ಠಾಣೆಯ ಹಳೇ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ ಈ ಹಿಂದೆಯೂ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 59/2011, ಅ.ಕ್ರ: 62/2020, ಅ.ಕ್ರ: 27/2021, ಅ.ಕ್ರ: 105/2021 ,ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 101/2022 ರಂತೆ ಗಂಭೀರ ಪ್ರಕರಣಗಳು ದಾಖಲಾಗಿದ್ದವು.

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ (SPP) ಕುದ್ರಿಯ ಪುಷ್ಪರಾಜ್ ಅಡ್ಯಂತಾಯ ಅವರು ಪ್ರಾಸಿಕ್ಯೂಷನ್ ಪರವಾಗಿ ಸಮರ್ಥ ವಾದ ಮಂಡಿಸಿದ್ದರು.

Related Articles

Latest Articles