
ಕಡಬ ಟೈಮ್ಸ್,ಪ್ರಮುಖ ಸುದ್ದಿ: ವಿಷದ ಹಾವೊಂದು ಕಚ್ಚಿ ತೀವ್ರ ಅಸ್ವಸ್ಥಗೊಂಡು ಸಾವಿನ ಅಂಚಿನಲ್ಲಿದ್ದ ನೆಲ್ಯಾಡಿಯ ವ್ಯಕ್ತಿಯೊಬ್ಬರಿಗೆ ಸತತ 90 ಇಂಜೆಕ್ಷನ್ ನೀಡಿ ಬದುಕಿಸಿದ ಅಪರೂಪದ ಘಟನೆ ಸೆ.21ರಂದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.


ಕಡಬ ತಾಲೂಕು ನೆಲ್ಯಾಡಿ ಸಮೀಪದ ಗೋಳಿತ್ತೊಟ್ಟು ಗ್ರಾಮದ ಶಾಂತಿನಗರ ನಿವಾಸಿ ಶೀನಪ್ಪ ಗೌಡ(63ವ.) ವಿಷದ ಹಾವು ಕಡಿದು ಸಾವಿನಂಚಿನಿಂದ ಬದುಕಿದವರು.
ಬೆಳಿಗ್ಗೆ ತೋಟಕ್ಕೆ ಹೋಗಿ ಬಾಳೆಗೊನೆ ಕಡಿದು ಬರುತ್ತಿದ್ದ ಸಂದರ್ಭ ನಾಗರ ಹಾವೊಂದು ಎಡಕಾಲಿನ ಹಿಂಭಾಗಕ್ಕೆ ಕಚ್ಚಿತ್ತು. ಇದರಿಂದ ಅಸ್ವಸ್ಥಗೊಂಡ ಅವರನ್ನು ಮನೆಯವರು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು.


ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆಗಾಗಲೇ ವಿಷದ ಪ್ರಮಾಣದಿಂದಾಗಿ ತೀವ್ರ ಅಸ್ವಸ್ಥಗೊಂಡು ಪ್ರಜ್ಞೆ ಕಳೆದುಕೊಂಡಿದ್ದರು. ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿ ಅವರಿಗೆ ಸತತ 90 ಇಂಜೆಕ್ಷನ್ ನೀಡಿದಾಗ ಪ್ರಜ್ಞೆ ಬಂದು ಚೇತರಿಸಿಕೊಂಡು ಸಾವಿನಂಚಿನಿಂದ ಹೊರ ಬಂದಿದ್ದಾರೆ.
ವಿಷದ ಹಾವು ಕಡಿತದ ವ್ಯಕ್ತಿಯನ್ನು ನಮ್ಮಲ್ಲಿಗೆ ಕರೆತರುವಾಗ ತೀರಾ ತಡವಾಗಿದೆ. ಆಗಲೇ ವಿಷದ ಪ್ರಮಾಣವೂ ದೇಹದ ಭಾಗಕ್ಕೆ ಹರಡಿತ್ತು. ಹಾಗಾಗಿ ಅವರು ಸಾವಿನ ಅಂಚಿನಲ್ಲಿದ್ದರು. ಎಎಸ್ವಿ 90 ಇಂಜೆಕ್ಷನ್ ನೀಡಲಾಯಿತು. ಇದರಿಂದ ಅವರಿಗೆ ಪ್ರಜ್ಞೆ ಬಂದಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿರುವುದನ್ನು ಸ್ಥಳೀಯ ಮಾದ್ಯಮವೊಂದು ವರದಿ ಪ್ರಕಟಿಸಿದೆ.
