ಹಳ್ಳಹಿಡಿದ ಕಡಬ–ಪಂಜ ರಸ್ತೆ ಒಂದು ಕೋಟಿ ರೂ ವೆಚ್ಚದ ಕಾಮಗಾರಿ: ನೋಟಿಸ್ ನೀಡಿ ಆರು ತಿಂಗಳಾದರೂ ಕಾಮಗಾರಿ ಆರಂಭಿಸದ ಗುತ್ತಿಗೆದಾರ

kadaba times

ಕಡಬ ತಾಲೂಕಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಕಡಬ–ಪಂಜ ರಸ್ತೆಯ ಅಭಿವೃದ್ಧಿ ಕಾಮಗಾರಿಯು ಗುತ್ತಿಗೆದಾರನ ಬೇಜವಾಬ್ದಾರಿತನ ಹಾಗೂ ಲೋಕೋಪಯೋಗಿ ಇಲಾಖೆ (PWD) ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರ್ಧಕ್ಕೇ ಸ್ಥಗಿತಗೊಂಡಿದೆ. ಅನುದಾನ ಲಭ್ಯವಿದ್ದರೂ ಕಾಮಗಾರಿ ಕುಂಠಿತವಾಗಿದ್ದು, ಅಧಿಕಾರಿಗಳು ಹೇಳುತ್ತಿದ್ದ ‘ಡಾಂಬರು ಕೊರತೆ’ ಕೇವಲ ಸುಳ್ಳು ನೆಪ ಎಂಬುದು ಮಾಹಿತಿ ಹಕ್ಕು (RTI) ಕಾಯ್ದೆಯ ಅಧಿಕೃತ ದಾಖಲೆಗಳಿಂದ ಬಯಲಾಗಿದೆ. 

kadaba times
uniq

ಕಡಬ: ಕಡಬ ಮತ್ತು ಸುಳ್ಯ ತಾಲೂಕುಗಳ ಜೀವನಾಡಿಯಾಗಿರುವ ಕಡಬ–ಪಂಜ ಜಿಲ್ಲಾ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿ  ಹಳ್ಳಹಿಡಿದಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ಸುಧಾರಣೆಗಾಗಿ ಹಂತ-ಹಂತವಾಗಿ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗಿದ್ದರೂ, ಗುತ್ತಿಗೆದಾರನ ಉದಾಸೀನತೆ ಹಾಗೂ ಲೋಕೋಪಯೋಗಿ ಇಲಾಖೆಯ (PWD) ಇಂಜಿನಿಯರ್‌ಗಳ ನಿಷ್ಕ್ರಿಯತೆಯಿಂದಾಗಿ ರಸ್ತೆಯು  ಹೊಂಡಗುಂಡಿಗಳ ತಾಣವಾಗಿ ಮಾರ್ಪಟ್ಟಿದೆ.

₹2 ಕೋಟಿ ಅನುದಾನ – ಕಳಪೆ ಕಾಮಗಾರಿಗೆ ತೇಪೆ ಭಾಗ್ಯ: ಈ ರಸ್ತೆಯ ಸುಧಾರಣೆಗಾಗಿ ಮೊದಲ ಹಂತದಲ್ಲಿ ₹1 ಕೋಟಿ ವೆಚ್ಚದಲ್ಲಿ ಕಡಬದಿಂದ ಕೆಇಬಿ ಕಚೇರಿವರೆಗೆ  ಅತೀ ಹೆಚ್ಚು ಹಾಳಾಗಿದ್ದ ಮೂರು ಪ್ರಮುಖ ಕಡೆಗಳಲ್ಲಿ ರಸ್ತೆಯನ್ನು ಎತ್ತರಿಸಿ ಕಾಂಕ್ರೀಟ್ ಅಳವಡಿಸಲಾಗಿತ್ತು.  ಬಳಿಕ ಎರಡನೇ ಹಂತದ ಕಾಮಗಾರಿಗಾಗಿ ಮತ್ತೊಂದು ₹1 ಕೋಟಿ ಮಂಜೂರಾಗಿದ್ದು, ಒಟ್ಟು ₹2 ಕೋಟಿ ಮೊತ್ತದ ಬೃಹತ್ ಅನುದಾನ ಲಭ್ಯವಿದೆ.

 ಹನುಮಾನ್ ನಗರದಿಂದ ಓಂತ್ರಡ್ಕದ ವರೆಗೆ  ಎರಡನೇ ಹಂತದ ಕಾಮಗಾರಿಗಾಗಿ ಮತ್ತೊಂದು ₹1 ಕೋಟಿ ಮಂಜೂರಾಗಿದ್ದು ಎರಡೆರಡು ಬಾರಿ   ಹೊಂಡಗಳಿಗೆ ಸಿಮೆಂಟ್ ಮಿಶ್ರಣದ ತೇಪೆ (ಪ್ಯಾಚ್ ವರ್ಕ್) ಹಾಕಿ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದಾರೆ. ಮಳೆ ಬಂದಾಗಲೆಲ್ಲಾ ಆ ತೇಪೆ ಕಿತ್ತುಹೋಗುತ್ತಿದ್ದು, ಮತ್ತೆ ಮತ್ತೆ ಸಿಮೆಂಟ್ ತೇಪೆ ಹಾಕುವ ನಾಟಕ ಮುಂದುವರಿದಿದೆ.

ಕಡಬ–ಪಂಜ ರಸ್ತೆ ಕಾಮಗಾರಿ ವಿಳಂಬಕ್ಕೆ ಸಂಬಂಧಿಸಿದಂತೆ ಸುಳ್ಯ ಲೋಕೋಪಯೋಗಿ ಇಲಾಖೆ ನೀಡಿರುವ ನೋಟಿಸ್ ಹಾಗೂ ಆರ್‌ಟಿಐ ಮಾಹಿತಿ ಪ್ರತಿಗಳು.

ಮಾಹಿತಿ ಹಕ್ಕಿನಲ್ಲಿ (RTI) ಬಯಲಾಯ್ತು : ಕಾಮಗಾರಿ ಆರಂಭವಾಗದೆ ವಿಳಂಬವಾದಾಗ ಆರ್ ಟಿ ಐ ಕಾರ್ಯಕರ್ತರೊಬ್ಬರು ಮಾಹಿತಿ ಹಕ್ಕಿನಡಿ ಸುಳ್ಯ ಲೋಕೋಪಯೋಗಿ ಇಲಾಖೆಯಿಂದ ಮಾಹಿತಿ ಕೋರಿದ್ದರು.  ಮಾಧ್ಯಮಗಳಿಗೆ “ಡಾಂಬರು ಕೊರತೆಯಿಂದಾಗಿ ಕೆಲಸ ನಿಂತಿದೆ” ಎಂದು ಹಾರಿಕೆ ಉತ್ತರ ನೀಡಿದ್ದರ ಬಗ್ಗೆ ವಿವರ ಕೇಳಿದ್ದರು . ಆದರೆ, ಆರ್‌ಟಿಐ ಕಾರ್ಯಕರ್ತರಿಗೆ  ಲೋಕೋಪಯೋಗಿ ಇಲಾಖೆ ಲಿಖಿತವಾಗಿ ನೀಡಿರುವ ಅಧಿಕೃತ ಉತ್ತರದಲ್ಲಿ ಇಲಾಖೆಯ ಅಸಲಿ ಬಣ್ಣ ಬಯಲಾಗಿದೆ:

  • ಡಾಂಬರು ಕೊರತೆಯ ಬಗ್ಗೆ ಸುಳ್ಯ ಇಂಜಿನಿಯರ್ ಮಾಧ್ಯಮಕ್ಕೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಮೇಲಾಧಿಕಾರಿಗಳಿಗೆ ಯಾವುದೇ ಅಧಿಕೃತ ವರದಿ ಸಲ್ಲಿಸಿಲ್ಲ (“ಲಭ್ಯವಿರುವುದಿಲ್ಲ” ಎಂದು ಉತ್ತರಿಸಲಾಗಿದೆ).

  • ವರ್ಕ್ ಆರ್ಡರ್ ಪ್ರಕಾರ ಗುತ್ತಿಗೆದಾರರು ಪ್ರತಿ ತಿಂಗಳು ನಿರ್ವಹಿಸಬೇಕಾದ ಕೆಲಸದ ಪ್ರಗತಿ ವರದಿ ಕೂಡ ಇಲಾಖೆಯ ಬಳಿ ಇಲ್ಲ.

  • ಕಡಬ–ಪಂಜ ರಸ್ತೆ ಕಾಮಗಾರಿ ವಿಳಂಬಕ್ಕೆ ಸಂಬಂಧಿಸಿದಂತೆ ಸುಳ್ಯ ಲೋಕೋಪಯೋಗಿ ಇಲಾಖೆ ನೀಡಿರುವ ನೋಟಿಸ್ ಹಾಗೂ ಆರ್‌ಟಿಐ ಮಾಹಿತಿ ಪ್ರತಿಗಳು.

    ಸ್ವತಃ ಲೋಕೋಪಯೋಗಿ ಇಲಾಖೆಯ ಸುಳ್ಯ ವಿಭಾಗದ ಇಂಜಿನಿಯರ್‌ಗಳೇ ಕಾಮಗಾರಿ ಪರಿಶೀಲನೆ ನಡೆಸಿದ ಯಾವುದೇ ಪರಿಶೀಲನಾ ವರದಿ ಕಚೇರಿಯಲ್ಲಿ ಲಭ್ಯವಿಲ್ಲ

ಗುತ್ತಿಗೆದಾರನಿಗೆ ನೋಟಿಸ್ ಜಾರಿ: ಸುಳ್ಯ ತಾಲೂಕು ಜಿಲ್ಲಾ ಮುಖ್ಯ ರಸ್ತೆಯಾದ ಪಂಜ–ಕಡಬ ರಸ್ತೆ ಕಿ.ಮೀ 6.50 ರಿಂದ 8.50 ರ ವರೆಗಿನ ಅಭಿವೃದ್ಧಿ ಕಾಮಗಾರಿಯನ್ನು ಬೆಳ್ತಂಗಡಿ ಮೂಲದ  ಗುತ್ತಿಗೆದಾರರೊಬ್ಬರಿಗೆ ವಹಿಸಲಾಗಿತ್ತು.

ಕರಾರು ಪತ್ರದ (ನಂ: 381/2025-26, ದಿನಾಂಕ: 22.01.2026) ಅನ್ವಯ 6 ತಿಂಗಳ ಕಾಲಾವಕಾಶ ನೀಡಿ, 02.02.2026 ರಂದು ನಿವೇಶನ ಹಸ್ತಾಂತರಿಸಲಾಗಿತ್ತು.  ದಿನಾಂಕ 21.07.2026 ರ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ಕಾಮಗಾರಿ ತೀವ್ರ ಕುಂಠಿತಗೊಂಡ ಹಿನ್ನೆಲೆಯಲ್ಲಿ ಸುಳ್ಯ ಉಪವಿಭಾಗದ ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರು ಗುತ್ತಿಗೆದಾರರಿಗೆ ದಿನಾಂಕ 27.04.2026 ರಂದು ಅಧಿಕೃತ ನೋಟಿಸ್ ನೀಡಿ, ಪ್ರತಿ ತಿಂಗಳು ಕನಿಷ್ಠ ಸುಮಾರು ₹28.26 ಲಕ್ಷ ಪ್ರಗತಿ ಸಾಧಿಸಿ ಕೆಲಸ ಮುಗಿಸುವಂತೆ ಸೂಚಿಸಿದ್ದರು. ಆದಾಗ್ಯೂ, ಗುತ್ತಿಗೆದಾರರು ಕಾಲಮಿತಿಯಲ್ಲಿ ಕೆಲಸ ಮುಗಿಸದೆ ಕಾಮಗಾರಿಯನ್ನು ಅರ್ಧಕ್ಕೆ ಕೈಬಿಟ್ಟಿದ್ದಾರೆ.

kadaba times
kadaba times

ಗುತ್ತಿಗೆದಾರರಿಗೆ ನೀಡಲಾದ ಅಧಿಕೃತ ಬಿಲ್ ಆಫ್ ಕ್ವಾಂಟಿಟೀಸ್  (BOQ)  ಪಟ್ಟಿಯ ಪ್ರಕಾರ:

  1. ರಸ್ತೆ ಸುಧಾರಣೆಯೊಂದಿಗೆ ಸುಮಾರು 800 ರಷ್ಟು ರಸ್ತೆ ಬದಿಯ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು.

  2. 4 ಹ್ಯೂಮ್ ಪೈಪ್ ಮೋರಿಗಳ ದುರಸ್ತಿ ಕಾರ್ಯ ಕಡ್ಡಾಯವಾಗಿ ನಡೆಸಬೇಕು.

  3. ರಸ್ತೆಯ ಆಳವಾದ ಮತ್ತು ಮೇಲ್ಪದರದ ಗುಂಡಿಗಳನ್ನು ಕಡ್ಡಾಯವಾಗಿ ಎಸ್‌ಡಿಬಿಸಿ (SDBC) ಗುಣಮಟ್ಟದ ಮಿಶ್ರಣದಿಂದಲೇ ಮುಚ್ಚಬೇಕು.

  4. ವಾಹನ ಸವಾರರ ಸುರಕ್ಷತೆಗಾಗಿ 16 ಟ್ರಾಫಿಕ್ ಸೈನ್ ಬೋರ್ಡ್‌ಗಳು ಹಾಗೂ 3 ಪ್ರಮುಖ ಮಾರ್ಗದರ್ಶನ ಫಲಕಗಳನ್ನು ಅಳವಡಿಸಬೇಕು.

ಆದರೆ ವಾಸ್ತವದಲ್ಲಿ ಚರಂಡಿಗಳನ್ನು ಸರಿಪಡಿಸದೆ ಇರುವುದರಿಂದ ಮಳೆ ನೀರು ರಸ್ತೆಯ ಮೇಲೆಯೇ ಹರಿದು ಡಾಂಬರು ಕಿತ್ತುಹೋಗುತ್ತಿದೆ. ಸಿಮೆಂಟ್ ತೇಪೆ ಹಾಕಿ ಕೈತೊಳೆದುಕೊಳ್ಳಲಾಗುತ್ತಿದೆಯೇ ಹೊರತು ಗುಣಮಟ್ಟದ ಮಾನದಂಡಗಳನ್ನು ಪಾಲಿಸಿಕೊಂಡು ಕಾಮಗಾರಿ ಮಾಡುತ್ತಿಲ್ಲ.

ಶಾಸಕರ ಭರವಸೆಯೂ ಹುಸಿ :“ಕಡಬದಿಂದ ಕೋಡಿಂಬಾಳದ ಓಂತ್ರಡ್ಕ ತನಕದ ರಸ್ತೆಯನ್ನು ಸಂಪೂರ್ಣವಾಗಿ ಸುಸಜ್ಜಿತವಾಗಿ ಅಭಿವೃದ್ಧಿಪಡಿಸಲಾಗುವುದು” ಎಂದು ಸ್ಥಳೀಯ ಶಾಸಕಿ ಸಾರ್ವಜನಿಕರಿಗೆ ಬಹಿರಂಗ ಭರವಸೆ ನೀಡಿದ್ದರು. ಆದರೆ ಕಾಮಗಾರಿ ಅಧೋಗತಿಗೆ ತಲುಪಿದ್ದರೂ ಜನಪ್ರತಿನಿಧಿಗಳು ಗುತ್ತಿಗೆದಾರನನ್ನು  ಪ್ರಶ್ನಿಸದಿರುವುದು ಸಾರ್ವಜನಿಕರಲ್ಲಿ ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಗುತ್ತಿಗೆದಾರನ ಟೆಂಡರ್ ಅನ್ನು ತಕ್ಷಣವೇ ಕಪ್ಪುಪಟ್ಟಿಗೆ ಸೇರಿಸಿ ರದ್ದುಗೊಳಿಸಬೇಕು ಹಾಗೂ ತ್ವರಿತವಾಗಿ ಕಾಮಗಾರಿ ನಿರ್ವಹಿಸಬಲ್ಲ ದಕ್ಷ ಗುತ್ತಿಗೆದಾರರಿಗೆ ಮರುಟೆಂಡರ್ ನೀಡಬೇಕೆಂದು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ಸಾಮಾಜಿಕ ಮುಂದಾಳುಗಳು ಸಿದ್ಧತೆ ನಡೆಸಿದ್ದಾರೆ.

Related Articles

Latest Articles