ಕಾಲೇಜು ಆಡಳಿತಕ್ಕೆ ಯಾವುದೇ ಲಿಖಿತ ಮನವಿ ನೀಡದೆ ವಿದ್ಯಾರ್ಥಿ ಸಂಘಟನೆಯ ಮುಖಂಡರಿಂದ ಏಕಾಏಕಿ ಪ್ರತಿಭಟನೆ

kadaba times

ಮಂಗಳೂರಿನ ಸಂತ ಆಗ್ನೆಸ್ ಸ್ವಾಯತ್ತ ಕಾಲೇಜಿನಲ್ಲಿ ಸೆಮಿಸ್ಟರ್ ಅಂತಿಮ ಪರೀಕ್ಷೆಗಳು ದಸರಾ ಹಬ್ಬದ ಸಂದರ್ಭದಲ್ಲಿ ನಿಗದಿಯಾಗಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ಸರ್ಕಾರಿ ರಜಾ ದಿನಗಳಲ್ಲಿ ಯಾವುದೇ ಪರೀಕ್ಷೆ ನಿಗದಿಪಡಿಸಿರಲಿಲ್ಲ ಎಂದು ತಿಳಿಸಿರುವ ಪ್ರಾಂಶುಪಾಲರಾದ ಭಗಿನಿ ಡಾ. ಎಂ. ವೆನಿಸ್ಸಾ, ಸೌಹಾರ್ದಯುತ ಶೈಕ್ಷಣಿಕ ವಾತಾವರಣ ಕಾಪಾಡುವ ಹಿತದೃಷ್ಟಿಯಿಂದ ಅಕ್ಟೋಬರ್ 19 ಮತ್ತು 22 ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪ್ರಕಟಿಸಿದ್ದಾರೆ.

kadaba times
uniq

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಸಂತ ಆಗ್ನೆಸ್ ಸ್ವಾಯತ್ತ ಕಾಲೇಜಿನಲ್ಲಿ 2026ರ ಸೆಮಿಸ್ಟರ್ ಅಂತಿಮ ಪರೀಕ್ಷೆಗಳ ವೇಳಾಪಟ್ಟಿ ಹಾಗೂ ದಸರಾ ಹಬ್ಬದ ರಜೆಯ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿದ್ದ ವಿವಾದಕ್ಕೆ ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎರಡು ದಿನಗಳ ಪರೀಕ್ಷೆಗಳನ್ನು ಮುಂದೂಡಿದೆ.

ಸರ್ಕಾರ ಘೋಷಿಸಿರುವ ಯಾವುದೇ ಸಾರ್ವಜನಿಕ ರಜಾ ದಿನಗಳಲ್ಲಿ ಪರೀಕ್ಷೆಗಳನ್ನು ನಿಗದಿಪಡಿಸಿರಲಿಲ್ಲ. ಆದಾಗ್ಯೂ, ವಿದ್ಯಾರ್ಥಿಗಳ ಕಳವಳವನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್ 19 ಹಾಗೂ ಅಕ್ಟೋಬರ್ 22 ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಡಾ. ಎಂ. ವೆನಿಸ್ಸಾ ತಿಳಿಸಿದ್ದಾರೆ.

ಕರಡು ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಿರಲಿಲ್ಲ: ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಪ್ರಾಂಶುಪಾಲರು, “ಅನುಮೋದಿತ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರವೇ ಪರೀಕ್ಷಾ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಸೆಪ್ಟೆಂಬರ್ 11 ರಂದೇ ಪರೀಕ್ಷೆಗಳ ಕರಡು ವೇಳಾಪಟ್ಟಿಯನ್ನು ಪ್ರಕಟಿಸಿ, ಆಕ್ಷೇಪಣೆಗಳು ಅಥವಾ ಬದಲಾವಣೆಗಳಿದ್ದಲ್ಲಿ ತಿಳಿಸಲು ವಿದ್ಯಾರ್ಥಿಗಳಿಗೆ ಬರೋಬ್ಬರಿ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ಯಾವುದೇ ಆಕ್ಷೇಪಣೆಗಳು ಅಥವಾ ಮನವಿಗಳು ಸಲ್ಲಿಕೆಯಾಗದ ಕಾರಣ, ಸೆಪ್ಟೆಂಬರ್ 26 ರಂದು ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಯಿತು. ಇಂಟರ್ನ್‌ಶಿಪ್ ಹಾಗೂ ಪ್ರಾಜೆಕ್ಟ್ ಕಾರ್ಯಗಳ ಶೈಕ್ಷಣಿಕ ಬದ್ಧತೆಗಳನ್ನು ಪರಿಗಣಿಸಿಯೇ ದಿನಾಂಕಗಳನ್ನು ನಿಗದಿಪಡಿಸಲಾಗಿತ್ತು” ಎಂದು ವಿವರಿಸಿದ್ದಾರೆ.

ಮುನ್ಸೂಚನೆ ಇಲ್ಲದೆ ಪ್ರತಿಭಟನೆ: ಪ್ರತಿಭಟನೆಯ ಕುರಿತು ಕಾಲೇಜಿಗೆ ಅಕ್ಟೋಬರ್ 11ರಂದು ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ತಿಳಿದುಬಂದಿತ್ತು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಯ ಮುನ್ನೆಚ್ಚರಿಕೆಯಾಗಿ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಲಾಗಿತ್ತು. ಆದರೆ, ಅಕ್ಟೋಬರ್ 12ರ ಸೋಮವಾರ ಕಾಲೇಜು ಆಡಳಿತಕ್ಕೆ ಯಾವುದೇ ಲಿಖಿತ ಮನವಿ ನೀಡದೆ ಕೆಲ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘಟನೆಯ ಮುಖಂಡರು ಏಕಾಏಕಿ ಪ್ರತಿಭಟನೆ ನಡೆಸಿ ಸಂಸ್ಥೆಯ ವಿರುದ್ಧ ಘೋಷಣೆ ಕೂಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

kadaba times
kadaba times

ಎರಡು ದಿನಗಳ ಪರೀಕ್ಷೆ ಮುಂದೂಡಿಕೆ 

ವಿದ್ಯಾರ್ಥಿಗಳ ಭಾವನೆಗಳಿಗೆ ಸ್ಪಂದಿಸಿ ಕಾಲೇಜಿನಲ್ಲಿ ಶಾಂತಿಯುತ ವಾತಾವರಣ ಕಾಪಾಡುವ ಸಲುವಾಗಿ ಅಕ್ಟೋಬರ್ 19 ಮತ್ತು 22 ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಪರಿಷ್ಕೃತ ದಿನಾಂಕಗಳನ್ನು ಶೀಘ್ರವೇ ಅಧಿಕೃತ ಮಾಧ್ಯಮಗಳ ಮೂಲಕ ಪ್ರಕಟಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಸಂತ ಆಗ್ನೆಸ್ ಕಾಲೇಜು ಜಾತ್ಯತೀತತೆ, ಸಮಾನತೆ, ಧಾರ್ಮಿಕ ಸಾಮರಸ್ಯ ಹಾಗೂ ಎಲ್ಲರನ್ನೂ ಒಳಗೊಳ್ಳುವ ಮೌಲ್ಯಗಳನ್ನು ಸದಾ ಎತ್ತಿಹಿಡಿಯುತ್ತದೆ. ವಿದ್ಯಾರ್ಥಿಗಳು ಸಂಸ್ಥೆಯ ನಿಯಮಾವಳಿಗಳನ್ನು ಗೌರವಿಸಿ ಘನತೆ ಕಾಪಾಡಬೇಕು. ಮುಂಬರುವ ದಿನಗಳಲ್ಲಿ ಯಾವುದೇ ಅಶಿಸ್ತಿನ ನಡವಳಿಕೆ ಅಥವಾ ಶಾಂತಿ ಕದಡುವ ಯತ್ನ ಕಂಡುಬಂದಲ್ಲಿ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಂಶುಪಾಲರು ಎಚ್ಚರಿಸಿದ್ದಾರೆ.

Related Articles

Latest Articles