
ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಪಿಎಂಸಿ ಯಾರ್ಡ್ ನಲ್ಲಿ ಪರವಾನಗಿ ಪಡೆಯದೆ ಕಟ್ಟಡ ನಿರ್ಮಿಸುತ್ತಿರುವುದು ಹಾಗೂ ಹಲವು ವರ್ಷಗಳಿಂದ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವ ವಿಚಾರವಾಗಿ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ.ಸಂಬಂಧಪಟ್ಟವರಿಗೆ ಒಂದು ವಾರದ ಗಡುವಿನ ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸಿ, ಪೊಲೀಸರ ಸಹಕಾರದೊಂದಿಗೆ ಅಕ್ರಮ ಕಟ್ಟಡ ತೆರವುಗೊಳಿಸಲು ಮತ್ತು ₹3.81 ಲಕ್ಷ ಬಾಕಿ ತೆರಿಗೆ ವಸೂಲಿ ಮಾಡಲು ಪಟ್ಟಣ ಪಂಚಾಯಿತಿ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.


ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಪಿಎಂಸಿ ಪ್ರಾಂಗಣದಲ್ಲಿ ಯಾವುದೇ ಅನುಮತಿ ಪಡೆಯದೆ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಹಾಗೂ ಅನಧಿಕೃತವಾಗಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಕುರಿತು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆದು, ಸಂಬಂಧಪಟ್ಟವರಿಗೆ ಒಂದು ವಾರದ ಗಡುವಿನ ಡಿಮ್ಯಾಂಡ್ ನೋಟಿಸ್ ನೀಡಿ ಕ್ರಮ ಕೈಗೊಳ್ಳಲು ನಿರ್ಣಯಿಸಲಾಗಿದೆ.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬೀನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು.
ಸಭೆಯಲ್ಲಿ ತೀವ್ರ ಚರ್ಚೆ – ₹3.81 ಲಕ್ಷ ತೆರಿಗೆ ಬಾಕಿ: ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಹಾಜಿ ಹನೀಫ್ ಕೆ.ಎಂ. ಕಡಬ, “ಎಪಿಎಂಸಿ ಪ್ರಾಂಗಣದಲ್ಲಿರುವ ವಾಣಿಜ್ಯ ಕಟ್ಟಡದಲ್ಲಿ ಯಾವುದೇ ಪರವಾನಗಿ ಪಡೆಯದೆ ಹಲವು ವರ್ಷಗಳಿಂದ ವ್ಯವಹಾರ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೆ, ಯಾವುದೇ ಪರವಾನಗಿ ಇಲ್ಲದೆ ಕಟ್ಟಡ ನಿರ್ಮಾಣವನ್ನೂ ಮಾಡಲಾಗುತ್ತಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ನಾಮನಿರ್ದೇಶಿತ ಸದಸ್ಯ ಫೈಝಲ್ ಕೋಡಿಂಬಾಳ ಮಾತನಾಡಿ, “ಎಪಿಎಂಸಿ ಪ್ರಾಂಗಣದಲ್ಲಿ ಕಟ್ಟಡ ನಿರ್ಮಾಣ ಹಾಗೂ ವ್ಯವಹಾರಗಳು ಗುಟ್ಟಾಗಿ ನಡೆಯುತ್ತಿಲ್ಲ, ಬಹಿರಂಗವಾಗಿಯೇ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ನಾವು ಮೌನವಾಗಿರುವುದೇ ನಮ್ಮ ತಪ್ಪು” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಉತ್ತರಿಸಿದ ಪಂಚಾಯಿತಿ ಸಿಬ್ಬಂದಿ ವಾರಿಜಾ, “ಸಂಬಂಧಪಟ್ಟವರಿಂದ ಕಳೆದ ಏಳು ವರ್ಷಗಳಿಂದ ಸುಮಾರು ₹3.81 ಲಕ್ಷ ತೆರಿಗೆ ಬಾಕಿ ಇದೆ. ಈ ಕುರಿತು ನೋಟಿಸ್ ನೀಡಿದ್ದರೂ ಬಾಕಿ ಪಾವತಿಯಾಗಿಲ್ಲ” ಎಂದು ಸಭೆಗೆ ಮಾಹಿತಿ ನೀಡಿದರು.


ಇದಕ್ಕೆ ಪ್ರತಿಕ್ರಿಯಿಸಿದ ಹಾಜಿ ಹನೀಫ್ ಅವರು, ಸಂಬಂಧಪಟ್ಟವರಿಗೆ ತಕ್ಷಣವೇ ಡಿಮ್ಯಾಂಡ್ ನೋಟಿಸ್ ನೀಡಿ, ಪೊಲೀಸರ ಸಹಕಾರ ಪಡೆದು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು ಹಾಗೂ ಬಾಕಿ ತೆರಿಗೆಯನ್ನೂ ವಸೂಲಿ ಮಾಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಸದಸ್ಯರಾದ ದಯಾನಂದ ಪಿಜಕ್ಕಳ, ಕೃಷ್ಣಪ್ಪ ಬೈಲಂಗಡಿ, ಅಕ್ಷತಾ ಬಾಲಕೃಷ್ಣ ಹಾಗೂ ಫೈಝಲ್ ಬೆಂಬಲ ಸೂಚಿಸಿದರು.
ಕಸ-ತ್ಯಾಜ್ಯ ಅವ್ಯವಸ್ಥೆ ಹಾಗೂ ಸಿಬ್ಬಂದಿ ನೇಮಕ ಚರ್ಚೆ:
- ತ್ಯಾಜ್ಯ ವಿಲೇವಾರಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುವ ಕೆಲವು ಕುಟುಂಬಗಳು ಸಾರ್ವಜನಿಕ ಸ್ಥಳಗಳಲ್ಲಿ ಕಸ-ತ್ಯಾಜ್ಯ ಎಸೆಯುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಾಜಿ ಹನೀಫ್ ಹೇಳಿದರು.
-
ಸಿಬ್ಬಂದಿ ನೇಮಕಾತಿ: ಕಸ ವಿಲೇವಾರಿಗೆ ಅಗತ್ಯ ಸಿಬ್ಬಂದಿ ನೇಮಕಾತಿ ವಿಚಾರವಾಗಿ ಸದಸ್ಯ ಕೃಷ್ಣಪ್ಪ ಬೈಲಂಗಡಿ ಪ್ರಶ್ನಿಸಿದಾಗ, ಎಂಜಿನಿಯರ್ ಶಿವಕುಮಾರ್ ಮಾತನಾಡಿ, “ಸಿಬ್ಬಂದಿಗಳ ನೇರ ನೇಮಕಾತಿಗೆ ಜಿಲ್ಲಾಧಿಕಾರಿಯಿಂದ ಅನುಮೋದನೆ ದೊರೆತಿದೆ. ಇಬ್ಬರು ಆಪರೇಟರ್, ನಾಲ್ಕು ಮಂದಿ ಡ್ರೈವರ್, ಏಳು ಮಂದಿ ಲೋಡರ್ ಹಾಗೂ ಒಬ್ಬ ಹೆಲ್ಪರ್ ನೇಮಕ ಮಾಡಿಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ” ಎಂದು ತಿಳಿಸಿದರು.
ಹಿಂದಿನ ಸಭೆಯ ನಿರ್ಣಯಗಳ ಅನುಷ್ಠಾನಕ್ಕೆ ಪಟ್ಟು: ಸಂತೇಕಟ್ಟೆ ಏಲಂ ವಿಚಾರದಲ್ಲಿ ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಇನ್ನೂ ಅನುಷ್ಠಾನಗೊಳಿಸಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಕೈಗೊಳ್ಳುವ ತೀರ್ಮಾನಗಳನ್ನು ಕಾಲಮಿತಿಯಲ್ಲಿ ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಸದಸ್ಯರು ಆಗ್ರಹಿಸಿದರು.
ಸಭೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ಇ., ಸದಸ್ಯರಾದ ಕುಸುಮಾ ಅಂಗಡಿಮನೆ, ಕೃಷ್ಣಪ್ಪ ನಾಯ್ಕ, ಗುಣವತಿ ದೊಡ್ಡಕೊಪ್ಪ, ಮೋಹನ, ರೋಹಿತ್ ಪಣೆಮಜಲು, ನಾಮನಿರ್ದೇಶಿತ ಸದಸ್ಯರಾದ ಶಾಲಿನಿ ಸತೀಶ್ ನಾಯ್ಕ್, ಮೋಹನ್ದಾಸ್ ಮತ್ತಿತರರು ಪಾಲ್ಗೊಂಡಿದ್ದರು. ಸಿಬ್ಬಂದಿಗಳಾದ ಹರೀಶ್ ಬೆದ್ರಾಜೆ, ಬಾಲಕೃಷ್ಣ ಕತ್ತಲ್ಸಾರ್, ಗುರುರಾಜ್ ಭಟ್, ಕೀರ್ತನ್, ಶಶಿಕಲಾ ಹಾಗೂ ರಿಯಾಝ್ ಸಭೆಗೆ ಪೂರಕ ಮಾಹಿತಿ ಒದಗಿಸಿದರು.
