
ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಗ್ರಾಮದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ನಡೆಸುತ್ತಿದ್ದ ಕೋಳಿ ಅಂಕದ ಅಡ್ಡೆಗೆ ಉಪನಿರೀಕ್ಷಕ ರಾಮಕೃಷ್ಣ ಅವರ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿದೆ. ದಾಳಿಯ ವೇಳೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಕಾದಾಟದ ಕೋಳಿಗಳು, ಬಾಳು (ಕತ್ತಿಗಳು) ಹಾಗೂ ₹3,050 ನಗದು ಹಣವನ್ನು ಜಪ್ತಿ ಮಾಡಲಾಗಿದೆ.


ವಿಟ್ಲ:ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಗ್ರಾಮದಲ್ಲಿ ಸರ್ಕಾರಿ ಜಾಗದಲ್ಲಿ ನಿಷೇಧಿತ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ವಿಟ್ಲ ಪೊಲೀಸರು ಯಶಸ್ವಿ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ ಕೋಳಿ ಅಂಕ ಆಡಿಸುತ್ತಿದ್ದ ನಾಲ್ವರನ್ನು ಬಂಧಿಸಿ, ಬಾಳು ಕತ್ತಿಗಳು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಕೃಷಪ್ಪ (59 ವರ್ಷ),ಲಕ್ಷ್ಮಣ ನಾಯ್ಕ್ (38 ವರ್ಷ),ಶೋಬಿತ್ ರಾಜ್ (29 ವರ್ಷ),ಯುವರಾಜ್ (46 ವರ್ಷ) ಎಂಬವರನ್ನು ವಶಕ್ಕೆ ಪಡೆಯಲಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ: ಪೆರುವಾಯಿ ಗ್ರಾಮದ ಸಾರ್ವಜನಿಕ ಸರ್ಕಾರಿ ಜಾಗವೊಂದರಲ್ಲಿ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಕೋಳಿ ಅಂಕ ಆಡಲಾಗುತ್ತಿದೆ ಎಂಬ ಖಚಿತ ವರ್ತಮಾನವು ಅಕ್ಟೋಬರ್ 2 ರಂದು ಮಧ್ಯಾಹ್ನ ವಿಟ್ಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಮಕೃಷ್ಣ ಅವರಿಗೆ ಲಭಿಸಿತ್ತು.


ತಕ್ಷಣವೇ ಕಾರ್ಯಪ್ರವೃತ್ತರಾದ ಪಿಎಸ್ಐ ರಾಮಕೃಷ್ಣ ಹಾಗೂ ಠಾಣಾ ಸಿಬ್ಬಂದಿಗಳ ತಂಡವು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಕಾನೂನುಬಾಹಿರವಾಗಿ ಹಣದ ಪಣವನ್ನಿಟ್ಟು ಕೋಳಿ ಅಂಕ ನಡೆಸುತ್ತಿರುವುದು ಸ್ಪಷ್ಟವಾಗಿ ಧೃಢಪಟ್ಟಿದೆ. ಪೊಲೀಸರು ಸ್ಥಳವನ್ನು ಸುತ್ತುವರಿದು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಸ್ವತ್ತುಗಳ ವಶ – ಪ್ರಕರಣ ದಾಖಲು: ದಾಳಿಯ ವೇಳೆ ಸ್ಥಳದಲ್ಲಿದ್ದ ಜೂಜಾಟಕ್ಕೆ ಪಣವಾಗಿಟ್ಟಿದ್ದ ₹3,050/- ನಗದು ಹಣ,ಕಾದಾಟಕ್ಕಾಗಿ ಬಳಸಲಾಗುತ್ತಿದ್ದ ಕೋಳಿಗಳು,ಕೋಳಿಗಳ ಕಾಲಿಗೆ ಕಟ್ಟುವ ಹರಿತವಾದ ಕತ್ತಿಗಳು (ಬಾಳು)ಎಲ್ಲವನ್ನೂ ಪೊಲೀಸರು ಸ್ಥಳದಲ್ಲೇ ಜಪ್ತಿ ಮಾಡಿದ್ದಾರೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 203/2026 ಕಾಯ್ದೆ ಮತ್ತು ಕಲಂಗಳು: ಕಲಂ 87, 93 ಕರ್ನಾಟಕ ಪೊಲೀಸ್ ಕಾಯ್ದೆ (KP Act), ಕಲಂ 3, 11(1)(m)(ii), 11(1)(n) ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ಹಾಗೂ ಕಲಂ 112 ಭಾರತೀಯ ನ್ಯಾಯ ಸಂಹಿತೆ (BNS) 2023 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
