
ಕಡಬ:ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಭಾರತ ಕಂಡ ಅಪ್ರತಿಮ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮವನ್ನು ಕಾಲೇಜು ಸಭಾಂಗಣದಲ್ಲಿ ಗೌರವ ಪೂರ್ವಕವಾಗಿ ಆಚರಿಸಲಾಯಿತು.


ಕಾರ್ಯಕ್ರಮದ ಆರಂಭದಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಗೌರವ ನಮನಗಳನ್ನು ಅರ್ಪಿಸಲಾಯಿತು.
ಗಾಂಧಿ ತಾಳ್ಮೆ, ಶಾಸ್ತ್ರೀಜಿಯವರ ತ್ಯಾಗ ಸಾರ್ವಕಾಲಿಕ – ಗಣೇಶ್ ಕೈಕುರೆ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಗಣೇಶ್ ಕೈಕುರೆ ಅವರು, “ಮಹಾತ್ಮಾ ಗಾಂಧೀಜಿಯವರು ತೋರಿದ ತಾಳ್ಮೆ, ಸತ್ಯ ಹಾಗೂ ಅಹಿಂಸೆಯ ಮಾರ್ಗ ಇಡೀ ಜಗತ್ತಿಗೇ ಮಾದರಿಯಾಗಿದೆ. ಇಂದಿನ ಅಶಾಂತಿಯ ಕಾಲಘಟ್ಟದಲ್ಲಿ ದೇಶಕ್ಕೆ ಶಾಂತಿ, ಸೌಹಾರ್ದತೆಯ ಸಂದೇಶ ನೀಡಿದ ಗಾಂಧೀಜಿಯವರ ಮೌಲ್ಯಗಳನ್ನು ಯುವಪೀಳಿಗೆ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ತೀರಾ ಅಗತ್ಯವಿದೆ” ಎಂದರು.
ಇದೇ ಸಂದರ್ಭದಲ್ಲಿ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕೊಡುಗೆಯನ್ನು ಸ್ಮರಿಸಿದ ಅವರು, “ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಶಾಸ್ತ್ರೀಜಿಯವರು ಅನುಭವಿಸಿದ ಕಠಿಣ ಸೆರೆಮನೆವಾಸ, ಅವರ ಅಪ್ರತಿಮ ಪ್ರಾಮಾಣಿಕತೆ ಹಾಗೂ ದೇಶಕ್ಕಾಗಿ ಮಾಡಿದ ನಿಸ್ವಾರ್ಥ ತ್ಯಾಗ ಎಂದಿಗೂ ಚಿರಸ್ಮರಣೀಯ” ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಿ. ದೇವರಾಜು ಅವರು ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ (CDC) ಉಪಾಧ್ಯಕ್ಷ ಅಶೋಕ್ ಕುಮಾರ್ ಹಾಗೂ ಎನ್ಎಸ್ಎಸ್ ರಜತ ಮಹೋತ್ಸವ (ಬೆಳ್ಳಿ ಹಬ್ಬ) ಸಮಿತಿಯ ಅಧ್ಯಕ್ಷ ರವಿಚಂದ್ರ ಪಡುಬೆಟ್ಟು, ಪೂರ್ವ ವಿದ್ಯಾರ್ಥಿ ಸಂಘದ ದಯಾನಂದ ಉಂಡಿಲ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾಲೇಜು ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ಹಿರಿಯ ಉಪನ್ಯಾಸಕ ವಾಸುದೇವ ಗೌಡ ಕೋಲ್ಪೆ ಅವರು ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಸಲಿನ್ ಕೆ.ಪಿ. ಅವರು ಸಮಾರಂಭವನ್ನು ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ವೃಂದ, ಬೋಧಕೇತರ ಸಿಬ್ಬಂದಿಗಳು, ಹಳೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು, ಎನ್ಎಸ್ಎಸ್ ಸ್ವಯಂಸೇವಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
