
ಕಡಬ–ಉಪ್ಪಿನಂಗಡಿ ಮುಖ್ಯ ರಸ್ತೆಯ ಆಲಂಕಾರು ಆಚಾರಿ ಕೊಟ್ಯ ಬಳಿ ಬೈಕ್ಗೆ ಮಹೀಂದ್ರಾ ಥಾರ್ ಜೀಪ್ ಡಿಕ್ಕಿ ಹೊಡೆಸಿ ಸವಾರ ಲೋಕೇಶ್ ನಾಡ್ತಿಲ (42) ಅವರ ಸಾವಿಗೆ ಕಾರಣವಾಗಿ ಪರಾರಿಯಾಗಿದ್ದ ಚಾಲಕ, ಆಲಂಕಾರು ನಿವಾಸಿ ಇಲ್ಯಾಸ್ ಎನ್.ಎ. (33) ಎಂಬಾತನನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮಾದಕವಸ್ತು ಪರೀಕ್ಷೆಗೆ ಒಳಪಡಿಸಲಾಗಿದ್ದು ಸೇವನೆ ದೃಢಪಟ್ಟಿಲ್ಲ; ಬಳಿಕ ಆತನನ್ನು ಸೂಕ್ತ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.


ಆಲಂಕಾರು / ಕಡಬ: ಕಡಬ ತಾಲೂಕಿನ ಆಲಂಕಾರು ಗ್ರಾಮದ ಆಚಾರಿ ಕೊಟ್ಯ ಸಮೀಪ ಕಡಬ–ಉಪ್ಪಿನಂಗಡಿ ಮುಖ್ಯ ರಸ್ತೆಯಲ್ಲಿ ಸೆಪ್ಟೆಂಬರ್ 25 ರಂದು ರಾತ್ರಿ ಬೈಕ್ಗೆ ಮಹೀಂದ್ರಾ ಥಾರ್ ವಾಹನ ಡಿಕ್ಕಿಯಾಗಿ ಸವಾರ ಲೋಕೇಶ್ ನಾಡ್ತಿಲ (42) ಮೃತಪಟ್ಟಿದ್ದ ಪ್ರಕರಣದಲ್ಲಿ, ಪರಾರಿಯಾಗಿದ್ದ ಥಾರ್ ಚಾಲಕನನ್ನು ಕಡಬ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
ಪೊಲೀಸ್ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಬಂಧಿತ ಚಾಲಕನನ್ನು ಕಡಬ ತಾಲೂಕಿನ ಆಲಂಕಾರು ನಿವಾಸಿ ಇಲ್ಯಾಸ್ ಎನ್.ಎ. (33) ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ: ಸೆಪ್ಟೆಂಬರ್ 25 ರಂದು ರಾತ್ರಿ ಸುಮಾರು 9:45 ರ ವೇಳೆಗೆ ಆಲಂಕಾರು ಗ್ರಾಮದ ನಾಡ್ತಿಲ ನಿವಾಸಿ ಲೋಕೇಶ್ ಅವರು ತಮ್ಮ ಬೈಕ್ನಲ್ಲಿ ತೆರಳುತ್ತಿದ್ದಾಗ, ಹಿಂಬದಿಯಿಂದ ಅತಿವೇಗವಾಗಿ ಬಂದ ಕಪ್ಪು ಬಣ್ಣದ ಮಹೀಂದ್ರಾ ಥಾರ್ (KA-21-MB-0233) ವಾಹನವು ರಭಸವಾಗಿ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಲೋಕೇಶ್ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.
ಅಪಘಾತವೆಸಗಿದ ಬಳಿಕ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದನು. ಈ ಕುರಿತು ಪ್ರತ್ಯಕ್ಷದರ್ಶಿ ಆಟೋ ಚಾಲಕ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತೀವ್ರ ಶೋಧ ನಡೆಸಿದ್ದರು.


ಆರೋಪಿಯ ಬಂಧನ – ವೈದ್ಯಕೀಯ ಪರೀಕ್ಷೆ:
ತಲೆಮರೆಸಿಕೊಂಡಿದ್ದ ಥಾರ್ ಚಾಲಕ ಇಲ್ಯಾಸ್ ಎನ್.ಎ. (33) ಎಂಬಾತನನ್ನು ಪತ್ತೆಹಚ್ಚಿ ಕಡಬ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದ ಅನುಮಾನದ ಹಿನ್ನೆಲೆಯಲ್ಲಿ, ಅಪಘಾತದ ವೇಳೆ ಚಾಲಕ ಗಾಂಜಾ ಅಥವಾ ಮಾದಕವಸ್ತು ಸೇವಿಸಿದ್ದಾನೆಯೇ ಎಂಬ ಬಗ್ಗೆ ಆತನನ್ನು ಸೂಕ್ತ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.
ವೈದ್ಯಕೀಯ ವರದಿಯಲ್ಲಿ ಆರೋಪಿ ಯಾವುದೇ ರೀತಿಯ ಮಾದಕವಸ್ತು (ಡ್ರಗ್ಸ್) ಸೇವನೆ ಮಾಡಿರುವುದು ದೃಢಪಟ್ಟಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಜಾಮೀನಿನ ಮೇಲೆ ಬಿಡುಗಡೆ: ಮಾದಕವಸ್ತು ಸೇವನೆ ದೃಢಪಡದ ಹಿನ್ನೆಲೆಯಲ್ಲಿ ಹಾಗೂ ದಾಖಲಾಗಿರುವ ಕಲಂಗಳನ್ವಯ ಆರೋಪಿತ ಚಾಲಕ ಇಲ್ಯಾಸ್ನನ್ನು ಕಾನೂನುಬದ್ಧ ಠಾಣಾ ಜಾಮೀನಿನೊಂದಿಗೆ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸರು ಹೆಚ್ಚಿನ ತನಿಖಾ ಪ್ರಕ್ರಿಯೆಗಳನ್ನು ಮುಂದುವರಿಸಿದ್ದಾರೆ.
