
ಕಡಬ ಮುಖ್ಯ ಪೇಟೆಯ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸ್ಥಳೀಯ ಹಿರಿಯ ವ್ಯಕ್ತಿ ಬಾಬು ಕುತ್ಯಾಡಿ ಅವರಿಗೆ ಮರ್ದಾಳ ಮೂಲದ ವ್ಯಕ್ತಿಯೊಬ್ಬರ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರ ಗಾಯಗೊಂಡಿದ್ದಾರೆ. ತಲೆ ಹಾಗೂ ಕೈಗೆ ತೀವ್ರ ಪೆಟ್ಟು ಬಿದ್ದಿರುವ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಫುಟ್ಪಾತ್ ಅತಿಕ್ರಮಣ ಹಾಗೂ ಅನಧಿಕೃತ ಪಾರ್ಕಿಂಗ್ ಕಾರಣವೆಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಡಬ: ಕಡಬ ಪಟ್ಟಣದ ಮುಖ್ಯ ಪೇಟೆಯ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹಿರಿಯ ವ್ಯಕ್ತಿಯೊಬ್ಬರಿಗೆ ಕಾರೊಂದು ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಗಂಭೀರ ಗಾಯಗೊಂಡಿರುವ ಘಟನೆ ಬುಧವಾರ (ಸೆಪ್ಟೆಂಬರ್ 23) ನಡೆದಿದೆ.
ಸ್ಥಳೀಯ ನಿವಾಸಿ, ಹಿರಿಯರಾದ ಬಾಬು ಕುತ್ಯಾಡಿ ಅಪಘಾತದಲ್ಲಿ ತೀವ್ರ ಗಾಯಗೊಂಡ ದುರ್ದೈವಿ.
ಪುತ್ತೂರು ಆಸ್ಪತ್ರೆಗೆ ದಾಖಲು: ಸೆಪ್ಟೆಂಬರ್ 23 ರಂದು ಬಾಬು ಕುತ್ಯಾಡಿ ಅವರು ಕಡಬ ಮುಖ್ಯ ಪೇಟೆಯ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಮರ್ದಾಳ ಮೂಲದ ವ್ಯಕ್ತಿಯೊಬ್ಬರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಇವರಿಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ರಸ್ತೆಗೆ ಬಿದ್ದ ಬಾಬು ಅವರ ತಲೆ ಹಾಗೂ ಕೈಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ. ತಕ್ಷಣವೇ ಸ್ಥಳದಲ್ಲಿದ್ದ ಸಾರ್ವಜನಿಕರು ಧಾವಿಸಿ, ತುರ್ತು ವಾಹನದ ಮೂಲಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಕಡಬ ಪೊಲೀಸರು ಡಿಕ್ಕಿ ಹೊಡೆದ ಕಾರನ್ನು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ದಿದ್ದಾರೆ.


ಫುಟ್ಪಾತ್ ಅತಿಕ್ರಮಣ, ಅನಧಿಕೃತ ಪಾರ್ಕಿಂಗ್ – ಪಟ್ಟಣ ಪಂಚಾಯತ್ ವಿರುದ್ಧ ಆಕ್ರೋಶ:
ಈ ಅಪಘಾತದ ಬೆನ್ನಲ್ಲೇ ಕಡಬ ಪಟ್ಟಣ ಪಂಚಾಯತ್ ಆಡಳಿತದ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಪಾದಚಾರಿಗಳು ಸುಗಮವಾಗಿ ಸಂಚರಿಸಬೇಕಾದ ಫುಟ್ಪಾತ್ಗಳನ್ನು (ಕಾಲುದಾರಿ) ವ್ಯಾಪಾರಿಗಳು ಅನಧಿಕೃತ ಗೂಡು ಅಂಗಡಿಗಳು ಹಾಗೂ ಸಾಮಗ್ರಿಗಳನ್ನು ಇಟ್ಟು ಸಂಪೂರ್ಣವಾಗಿ ಅತಿಕ್ರಮಿಸಿಕೊಂಡಿದ್ದಾರೆ. ಮುಖ್ಯ ರಸ್ತೆಯ ಇಕ್ಕೆಲಗಳಲ್ಲೂ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡಲಾಗುತ್ತಿದ್ದು, ಪಾದಚಾರಿಗಳು ನಡೆದುಕೊಂಡು ಹೋಗಲು ಜಾಗವೇ ಇಲ್ಲದಂತಾಗಿದೆ.ಅನಿವಾರ್ಯವಾಗಿ ವಾಹನಗಳು ವೇಗವಾಗಿ ಚಲಿಸುವ ಮುಖ್ಯ ಡಾಂಬರು ರಸ್ತೆಯಲ್ಲೇ ಜೀವಭಯದಿಂದ ನಡೆಯುವಂತಾಗಿದ್ದು, ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ.
ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವುದಾಗಿ ಈ ಹಿಂದೆ ಪ.ಪ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ವ್ಯವಸ್ಥಿತ ಪಾರ್ಕಿಂಗ್ ನಿಯಮ ಜಾರಿಗೊಳಿಸಲು ಪೊಲೀಸ್ ಇಲಾಖೆ ಜೊತೆ ಸಮನ್ವಯ ಸಾಧಿಸಿ ಸಭೆ ನಡೆಸದೆ ನಿರ್ಲಕ್ಷವಹಿಸಿದೆ ಎಂಬ ಆರೋಪ ನಾಗರಿಕರಿಂದ ವ್ಯಕ್ತವಾಗಿದೆ .
