
ರಾಮಕುಂಜ / ಕಡಬ:ರಾಮಕುಂಜ ಗ್ರಾಮದ ಕಾಜರುಕ್ಕು ನಿವಾಸಿ, ಯುವಕ ಸಚಿನ್ (33) ಅವರು ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹಠಾತ್ ಸಂಭವಿಸಿದ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವ ದುರಂತ ಘಟನೆ ಸೆಪ್ಟೆಂಬರ್ 22 ರಂದು ಮಧ್ಯಾಹ್ನ ನಡೆದಿದೆ.


ಕಾಜರುಕ್ಕು ದಿ. ವಿಶ್ವನಾಥ ಪೂಜಾರಿ ಅವರ ಪುತ್ರ ಸಚಿನ್ (33) ಮೃತಪಟ್ಟ ದುರ್ದೈವಿ.
ಬೈಕ್ ಮೆಕ್ಯಾನಿಕ್ ಆಗಿದ್ದ ಸಚಿನ್ ಕೆಸಿಡಿಸಿಯಲ್ಲಿ ಕರ್ತವ್ಯ:ಹಿಂದೆ ಕಾಜರುಕ್ಕು ಎಂಬಲ್ಲಿ ಸ್ವಂತ ಬೈಕ್ ಸರ್ವೀಸ್ ಸ್ಟೇಷನ್ ನಡೆಸುತ್ತಿದ್ದ ಸಚಿನ್, ಬಳಿಕ ಅದನ್ನು ಬಿಟ್ಟು ಕಳೆದ ಒಂದೂವರೆ ವರ್ಷದಿಂದ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ (KCDC) ಮಂಗಳೂರು ವಿಭಾಗದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಅರಣ್ಯ ವೀಕ್ಷಕರಾಗಿ (Forest Watcher) ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.
ಎಂದಿನಂತೆ ಕರ್ತವ್ಯದಲ್ಲಿದ್ದ ಸಚಿನ್, ಸೆಪ್ಟೆಂಬರ್ 22 ರಂದು ಮಧ್ಯಾಹ್ನ ಸುಮಾರು 1:30 ರ ವೇಳೆಗೆ ಮನೆಗೆ ಊಟಕ್ಕೆ ಬಂದಿದ್ದರು. ಊಟ ಮುಗಿಸಿದ ಬಳಿಕ ಕೊಠಡಿಯಲ್ಲಿ ವಿಶ್ರಾಂತಿಗಾಗಿ ಮಲಗಿದ್ದರು.
ತೀವ್ರ ಉಸಿರಾಟದ ಸಮಸ್ಯೆ – ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸಾವು: ಮಧ್ಯಾಹ್ನ ಸುಮಾರು 3:00 ಗಂಟೆಯ ವೇಳೆಗೆ ತಾಯಿ ಸಚಿನ್ ಅವರನ್ನು ಎಬ್ಬಿಸಲು ಹೋದಾಗ, ಅವರು ಅತಿಯಾದ ವೇಗದಲ್ಲಿ ಹಾಗೂ ಕಷ್ಟಪಟ್ಟು ಉಸಿರಾಡುತ್ತಿರುವುದು ಕಂಡುಬಂದಿದೆ. ಗಾಬರಿಗೊಂಡ ತಾಯಿ ತಕ್ಷಣವೇ ಮತ್ತೊಬ್ಬ ಮಗ ಚರಣ್ ಅವರಿಗೆ ಮಾಹಿತಿ ನೀಡಿದ್ದಾರೆ.


ಸ್ಥಳಕ್ಕೆ ಧಾವಿಸಿದ ಚರಣ್ ಅವರು ಸಚಿನ್ ಸ್ಥಿತಿ ಗಂಭೀರವಾಗಿರುವುದನ್ನು ಗಮನಿಸಿ, ಪರಿಚಯಸ್ಥರಾದ ಪ್ರಶಾಂತ್ ಅವರ ಕಾರಿನಲ್ಲಿ ತಕ್ಷಣವೇ ಸಮೀಪದ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ, ಮಧ್ಯಾಹ್ನ 3:10 ರ ವೇಳೆಗೆ ಪರೀಕ್ಷಿಸಿದ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಚಿನ್ ಅವರು ಅದಾಗಲೇ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಕಡಬ ಠಾಣೆಯಲ್ಲಿ ಪ್ರಕರಣ ದಾಖಲು:ಘಟನೆಯ ಬಳಿಕ ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಚಿನ್ ಅವರು ಹೃದಯಾಘಾತದಿಂದ ಅಥವಾ ಯಾವುದೇ ಆಂತರಿಕ ಅನಾರೋಗ್ಯದಿಂದ ಮೃತಪಟ್ಟಿದ್ದು, ಅವರ ಸಾವಿನಲ್ಲಿ ಯಾವುದೇ ಸಂಶಯವಿರುವುದಿಲ್ಲ ಎಂದು ಮೃತರ ಅಣ್ಣ ಚರಣ್ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.
ಕೇವಲ 33 ವರ್ಷದ ಕ್ರಿಯಾಶೀಲ ಯುವಕನ ಅಕಾಲಿಕ ನಿಧನಕ್ಕೆ ರಾಮಕುಂಜ ಹಾಗೂ ಕಾಜರುಕ್ಕು ಪರಿಸರದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ. ಮೃತರು ತಾಯಿ, ಓರ್ವ ಸಹೋದರ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.
