ಬಿಳಿನೆಲೆ: ಚಿತ್ರೀಕರಣ ತಡೆದು ಪೊಲೀಸರ ಮೂಲಕ ಹೊರಕಳುಹಿಸಲು ಯತ್ನ

kadaba times

ಕಡಬ ತಾಲೂಕಿನ ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯಲ್ಲಿ ಡಿಜಿಟಲ್ ವಾಹಿನಿಯ ಮಾಧ್ಯಮ ಮುಖ್ಯಸ್ಥರೊಬ್ಬರಿಗೆ ವೀಡಿಯೋ ಚಿತ್ರೀಕರಣ ಮಾಡದಂತೆ ಅಧ್ಯಕ್ಷರು ಮೌಖಿಕ ಸೂಚನೆ ನೀಡಿ, ಪೊಲೀಸರ ಮೂಲಕ ಹೊರಕಳುಹಿಸಲು ಮುಂದಾಗಿದ್ದು ಸಭೆಯಲ್ಲಿ  ಕೋಲಾಹಲಕ್ಕೆ ಕಾರಣವಾಯಿತು. ಚಿತ್ರೀಕರಣ ನಿರ್ಬಂಧಿಸಿದರೆ ಮಹಾಸಭೆ ನಡೆಸಲು ಬಿಡುವುದಿಲ್ಲ ಎಂದು ಸದಸ್ಯರು ಆಡಳಿತ ಮಂಡಳಿಯ ವಿರುದ್ಧವೇ ತಿರುಗಿಬಿದ್ದ ಪರಿಣಾಮ, ಕೊನೆಗೆ ಸದಸ್ಯರ ಒತ್ತಾಯದ ಮೇರೆಗೆ ಪೂರ್ಣ ಚರ್ಚೆಯನ್ನು ವೀಡಿಯೋ ಚಿತ್ರೀಕರಿಸಲಾಯಿತು.

kadaba times
uniq

ಕಡಬ / ಬಿಳಿನೆಲೆ: ಕಡಬ ತಾಲೂಕಿನ ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ (ಸಿಎ ಬ್ಯಾಂಕ್) ವಾರ್ಷಿಕ ಮಹಾಸಭೆಯು ಮಾಧ್ಯಮ ವೀಡಿಯೋ ಚಿತ್ರೀಕರಣ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಹಾಗೂ ಸದಸ್ಯರ ನಡುವಿನ ತೀವ್ರ ವಾಗ್ವಾದ, ಆಕ್ರೋಶಕ್ಕೆ ಸಾಕ್ಷಿಯಾಯಿತು.

ಸೆಪ್ಟೆಂಬರ್ 20 ರಂದು ಸಂಘದ ಸಭಾಂಗಣದಲ್ಲಿ ನಡೆದ ಮಹಾಸಭೆಯ ಸಂದರ್ಭದಲ್ಲಿ ಈ ನಾಟಕೀಯ ವಿದ್ಯಮಾನಗಳು ಜರುಗಿದ್ದು, ಸದ್ಯ ಈ ಘಟನೆಯು ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಚಿತ್ರೀಕರಣ ತಡೆದು ಪೊಲೀಸರ ಮೂಲಕ ಹೊರಕಳುಹಿಸಲು ಯತ್ನ: ಮಹಾಸಭೆಯ ಆರಂಭದಲ್ಲಿ ಸ್ಥಳೀಯ ಡಿಜಿಟಲ್ ಸುದ್ದಿ ವಾಹಿನಿಯ ಮಾಧ್ಯಮ ಮುಖ್ಯಸ್ಥರೊಬ್ಬರು ಸಭಾ ನಡಾವಳಿಗಳನ್ನು ವೀಡಿಯೋ ಚಿತ್ರೀಕರಣ ಮಾಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಚಿತ್ರೀಕರಣ ಮಾಡದಂತೆ ಮೌಖಿಕವಾಗಿ ಸೂಚನೆ ನೀಡಿದ್ದಲ್ಲದೆ, ಸ್ಥಳದಲ್ಲಿದ್ದ ಬೀಟ್ ಪೊಲೀಸರಿಗೆ ವೀಡಿಯೋ ಮಾಡುತ್ತಿದ್ದ ಮಾಧ್ಯಮದವರನ್ನು ಸಭಾಂಗಣದಿಂದ ಹೊರಗೆ ಕಳುಹಿಸುವಂತೆ ಸೂಚಿಸಿದರು ಎನ್ನಲಾಗಿದೆ. ಅಧ್ಯಕ್ಷರ ಈ ನಡೆಯಿಂದಾಗಿ ಸಭಾಂಗಣದಲ್ಲಿ ಕೆಲಕಾಲ ತೀವ್ರ ಗೊಂದಲ ಹಾಗೂ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು.

kadaba times
kadaba times

ಆಡಳಿತ ಮಂಡಳಿ ವಿರುದ್ಧ ತಿರುಗಿಬಿದ್ದ ಸದಸ್ಯರು: ಪೊಲೀಸರ ಮೂಲಕ ಮಾಧ್ಯಮ ಪ್ರತಿನಿಧಿಯನ್ನು ಹೊರಕಳುಹಿಸಲು ಮುಂದಾಗುತ್ತಿದ್ದಂತೆ ಸಭೆಯಲ್ಲಿದ್ದ ಬಹುತೇಕ ಸದಸ್ಯರು ಆಡಳಿತ ಮಂಡಳಿಯ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಸಹಕಾರಿ ಸಂಘದ ಮಹಾಸಭೆಯು ರೈತರು ಹಾಗೂ ಸದಸ್ಯರ ಸಮ್ಮುಖದಲ್ಲಿ ನಡೆಯುವ ಪಾರದರ್ಶಕ ವೇದಿಕೆ. ಇಲ್ಲಿ ಮುಚ್ಚಿಡುವಂತದ್ದು ಏನೂ ಇಲ್ಲ. ಮಾಧ್ಯಮದವರ ಚಿತ್ರೀಕರಣವನ್ನು ನಿರ್ಬಂಧಿಸಿದರೆ ಯಾವುದೇ ಕಾರಣಕ್ಕೂ ಮಹಾಸಭೆ ನಡೆಸಲು ಬಿಡುವುದಿಲ್ಲ” ಎಂದು ಸದಸ್ಯರು ಎಚ್ಚರಿಕೆ ನೀಡಿದರು.

ಸದಸ್ಯರ ಒಕ್ಕೊರಲ ಆಕ್ಷೇಪ ಹಾಗೂ ಪ್ರತಿಭಟನಾತ್ಮಕ ನಿಲುವಿನಿಂದಾಗಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಪ್ರಯತ್ನಕ್ಕೆ ಭಾರಿ ಹಿನ್ನಡೆಯಾಯಿತು.

ಸದಸ್ಯರ ಸೂಚನೆಯಂತೆ ಚಿತ್ರೀಕರಣ – ಸಭೆ ಮುಂದುವರಿಕೆ: ಸದಸ್ಯರು ಪಟ್ಟುಬಿಡದೆ ಮಾಧ್ಯಮದವರಿಗೆ “ನೀವು  ಸಂಪೂರ್ಣ ಮಹಾಸಭೆಯ ಚರ್ಚೆಯನ್ನು ವೀಡಿಯೋ ಚಿತ್ರೀಕರಿಸಿ” ಎಂದು ಸೂಚಿಸಿದರು. ಬಳಿಕ ಮಹಾಸಭೆಯ ಸಂಪೂರ್ಣ ಚರ್ಚೆ ಹಾಗೂ ನಡಾವಳಿಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಯಿತು. ಸಹಕಾರಿ ಸಂಘದಲ್ಲಿ ಪಾರದರ್ಶಕತೆಗೆ ಆಗ್ರಹಿಸಿ ಸದಸ್ಯರೇ ಮಾಧ್ಯಮ ಸ್ವಾತಂತ್ರ್ಯದ ಪರವಾಗಿ ನಿಂತ ಈ ವಿದ್ಯಮಾನವು ತಾಲೂಕಿನಾದ್ಯಂತ ಭಾರೀ ಸಂಚಲನ ಮೂಡಿಸಿದೆ.

Related Articles

Latest Articles