ಆಲಂಕಾರು: ದೇವರಂತೆ ಧಾವಿಸಿದ ‘108’ ಸಿಬ್ಬಂದಿ: ಚಲಿಸುವ ಆಂಬುಲೆನ್ಸ್ ನಲ್ಲೇ ಗರ್ಭಿಣಿಗೆ ಹೆರಿಗೆ

kadaba times

ಆಲಂಕಾರು / ಕಡಬ: ಹೆರಿಗೆ ನೋವಿನಿಂದ ನರಳುತ್ತಿದ್ದ ಪರವೂರಿನ ಮಹಿಳೆಯೊಬ್ಬರಿಗೆ ಆಸ್ಪತ್ರೆ ತಲುಪುವ ಮೊದಲೇ ಚಲಿಸುವ ಆಂಬುಲೆನ್ಸ್‌ನಲ್ಲೇ ತುರ್ತು ಹೆರಿಗೆ ಮಾಡಿಸುವ ಮೂಲಕ 108 ಆಂಬುಲೆನ್ಸ್ ಸಿಬ್ಬಂದಿ ಸಮಯಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆ ಮೆರೆದ ಮಾನವೀಯ ಘಟನೆ ಆಲಂಕಾರು ಸಮೀಪ ನಡೆದಿದೆ.

kadaba times
uniq

ಜಾರ್ಖಂಡ್ ಮೂಲದ 21 ವರ್ಷದ ಮಹಿಳೆ  ಗಂಡು ಮಗುವಿಗೆ ಆಂಬುಲೆನ್ಸ್‌ನಲ್ಲೇ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಸಿಬ್ಬಂದಿಯಿಂದ ತುರ್ತು ಹೆರಿಗೆ: ಜಾರ್ಖಂಡ್ ರಾಜ್ಯದಿಂದ ಕಡಬ ತಾಲೂಕಿನ ಆಲಂಕಾರು ಗ್ರಾಮದ ಮುಳ್ಳಂಕೊಚ್ಚಿ ಎಂಬಲ್ಲಿಗೆ ಕೃಷಿ ತೋಟದ ಕೂಲಿ ಕೆಲಸಕ್ಕಾಗಿ ಈ ಕುಟುಂಬ ಆಗಮಿಸಿತ್ತು. 21 ವರ್ಷದ ತುಂಬು ಗರ್ಭಿಣಿಗೆ ಹಠಾತ್ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಸ್ಥಳೀಯರು ‘108’ ತುರ್ತು ಆಂಬುಲೆನ್ಸ್ ಸೇವೆಗೆ ಕರೆ ಮಾಡಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ತುರ್ತು ವಾಹನವು ಮುಳ್ಳಂಕೊಚ್ಚಿ ಸ್ಥಳಕ್ಕೆ ಧಾವಿಸಿ ಗರ್ಭಿಣಿಯನ್ನು ಹತ್ತಿಸಿಕೊಂಡು ಪುತ್ತೂರು ತಾಲೂಕು ಆಸ್ಪತ್ರೆಯತ್ತ ವೇಗವಾಗಿ ಸಾಗಿತ್ತು. ಆದರೆ ಮಾರ್ಗಮಧ್ಯೆ ನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆ ತಲುಪಲು ಕಾಯದೆ, ವಾಹನದಲ್ಲೇ ಹೆರಿಗೆ ಮಾಡಿಸಲು ಸಿಬ್ಬಂದಿ ನಿರ್ಧರಿಸಿದರು.

kadaba times
kadaba times

ನರ್ಸ್ ಚಂದ್ರಶೇಖರ್, ಚಾಲಕ ಸತೀಶ್ ಸಮಯಪ್ರಜ್ಞೆ: 108 ಆಂಬುಲೆನ್ಸ್‌ನ ನರ್ಸ್ (ಶುಶ್ರೂಷಕ) ಚಂದ್ರಶೇಖರ್ ಅವರು ಅತ್ಯಂತ ಜಾಗರೂಕತೆ ಹಾಗೂ ಜವಾಬ್ದಾರಿಯಿಂದ ಪ್ರಸವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಆಂಬುಲೆನ್ಸ್ ಚಾಲಕ ಸತೀಶ್ ಅವರು ಸಂಪೂರ್ಣ ಸಹಕಾರ ನೀಡಿದರು.

ಯಶಸ್ವಿ ಹೆರಿಗೆಯ ನಂತರ ತಾಯಿ ಮತ್ತು ನವಜಾತ ಗಂಡು ಶಿಶುವನ್ನು ಹೆಚ್ಚಿನ ಆರೈಕೆಗಾಗಿ ಪುತ್ತೂರು ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಕಾಲದಲ್ಲಿ ಸ್ಪಂದಿಸಿ ಹೆರಿಗೆ ಮಾಡಿಸಿದ ಆಂಬುಲೆನ್ಸ್ ಸಿಬ್ಬಂದಿಯ ಕಾರ್ಯವೈಖರಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

Related Articles

Latest Articles