
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ನೆಲ್ಯಾಡಿ ವಿದ್ಯಾನಗರದಲ್ಲಿ ಯು-ಟರ್ನ್ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ “ನೆಲ್ಯಾಡಿ ಯು ಟರ್ನ್ ಹೋರಾಟ ಸಮಿತಿ” ಸೆ.9ರಂದು ಗಾಂಧಿ ಮೈದಾನದಲ್ಲಿ ಹಮ್ಮಿಕೊಂಡಿರುವ ಶಾಂತಿಯುತ ಪ್ರತಿಭಟನೆಗೆ ಪೊಲೀಸ್ ಇಲಾಖೆಯು ಷರತ್ತುಬದ್ಧ ಅನುಮತಿ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಂತೆ ಹೆದ್ದಾರಿ ತಡೆ ನಡೆಸಿದರೆ ಸಂಘಟಕರು ಹಾಗೂ ಪ್ರತಿಭಟನಾಕಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.


ಕಡಬ / ನೆಲ್ಯಾಡಿ:ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ, ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ವಿದ್ಯಾನಗರ ಸಮೀಪ ಸಾರ್ವಜನಿಕರಿಗೆ ಸುಲಭ ಸಂಪರ್ಕಕ್ಕಾಗಿ ‘ಯು-ಟರ್ನ್’ (U-Turn) ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ “ನೆಲ್ಯಾಡಿ ಯು ಟರ್ನ್ ಹೋರಾಟ ಸಮಿತಿ” ವತಿಯಿಂದ ಸೆಪ್ಟೆಂಬರ್ 9 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಅನುಮತಿ ನೀಡಿದೆ.
ಗಾಂಧಿ ಮೈದಾನದಲ್ಲಿ ಪ್ರತಿಭಟನೆಗೆ ಅನುಮತಿ:
ದಿನಾಂಕ 09-09-2026 ರಂದು ಬೆಳಿಗ್ಗೆ 9:30 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯವರೆಗೆ ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಮಾತ್ರ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.


ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿ-ಆತಂಕ ಅಥವಾ ತೊಂದರೆ ಉಂಟುಮಾಡುವುದಿಲ್ಲವೆಂದು ಸಂಘಟಕರು ಪೊಲೀಸ್ ಇಲಾಖೆಗೆ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಈ ಷರತ್ತುಬದ್ಧ ಅನುಮತಿ ನೀಡಲಾಗಿದೆ.
ರಸ್ತೆ ತಡೆ ವದಂತಿ – ಪೊಲೀಸರ ಖಡಕ್ ಎಚ್ಚರಿಕೆ:
ಪ್ರತಿಭಟನೆಯ ನೆಪದಲ್ಲಿ ಹೆದ್ದಾರಿ ತಡೆ ನಡೆಸಲಾಗುತ್ತದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಪ್ರಕಟಣೆ ಮೂಲಕ ಸ್ಪಷ್ಟ ಎಚ್ಚರಿಕೆ ನೀಡಿದೆ:
- ಗಾಂಧಿ ಮೈದಾನ ಬಿಟ್ಟು ರಾಷ್ಟ್ರೀಯ ಹೆದ್ದಾರಿಗೆ ಬಂದು ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡಬಾರದು.
- ಸಾರ್ವಜನಿಕ ಶಾಂತಿಭಂಗ ಅಥವಾ ಹೆದ್ದಾರಿ ತಡೆ ನಡೆಸಿದರೆ ಅಂತಹ ಸಂಘಟಕರು, ಆಯೋಜಕರು ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು.
ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳಿಗೆ ಕಿವಿಗೊಡದೆ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಮನವಿ ಮಾಡಿದ್ದಾರೆ.
