
ಖ್ಯಾತ ಸಾಹಿತಿ ಶಕುಂತಳಾ ಟಿ. ಶೆಟ್ಟಿ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಆಯೋಜಿಸಲಾಗಿರುವ ಕಡಬ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆ.29ರಂದು ರಾಮಕುಂಜದಲ್ಲಿ ಚಾಲನೆ ದೊರೆತಿದೆ. ಕಾಜರುಕ್ಕು ವೃತ್ತದಿಂದ ಸಮ್ಮೇಳನ ಸಭಾಂಗಣದವರೆಗೆ ಚೆಂಡೆ-ವಾದ್ಯಗಳೊಂದಿಗೆ ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆ ಜರುಗಿತು.


ರಾಮಕುಂಜ / ಕಡಬ:ಕಡಬ ತಾಲೂಕು 5ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಮಕುಂಜದ ಶ್ರೀ ವಿಶ್ವೇಶತೀರ್ಥ ಸೌಧ ಸಭಾಂಗಣದಲ್ಲಿ ಶನಿವಾರ (ಆಗಸ್ಟ್ 29) ಬೆಳಿಗ್ಗೆ ಅತ್ಯಂತ ಸಂಭ್ರಮ ಹಾಗೂ ಸಾಹಿತ್ಯಿಕ ವೈಭವದೊಂದಿಗೆ ಚಾಲನೆ ನೀಡಲಾಯಿತು. ಖ್ಯಾತ ಸಾಹಿತಿ ಶಕುಂತಳಾ ಟಿ. ಶೆಟ್ಟಿ ಅವರು ಈ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿದ್ದಾರೆ.
ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆ: ಸಮ್ಮೇಳನದ ಅಂಗವಾಗಿ ಬೆಳಿಗ್ಗೆ ಕಾಜರುಕ್ಕು ವೃತ್ತದಿಂದ ಸಮ್ಮೇಳನ ನಡೆಯುವ ರಾಮಕುಂಜ ಶ್ರೀ ವಿಶ್ವೇಶತೀರ್ಥ ಸೌಧ ಸಭಾಂಗಣದವರೆಗೆ ಕನ್ನಡ ಭುವನೇಶ್ವರಿಯ ಅದ್ಧೂರಿ ಶೋಭಾಯಾತ್ರೆ ನಡೆಯಿತು. ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ್ ಕೆ. ಅವರು ಮೆರವಣಿಗೆಗೆ ಅಧಿಕೃತ ಚಾಲನೆ ನೀಡಿದರು. ಕೊಯಿಲ ಗ್ರಾ.ಪಂ. ನಿಕಟಪೂರ್ವಾಧ್ಯಕ್ಷೆ ಪುಷ್ಪಾ ಸುಭಾಷ್ ಶೆಟ್ಟಿ ಅವರು ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.


ಚೆಂಡೆ, ಬ್ಯಾಂಡ್ ವಾದನ, ಕಲಾತಂಡಗಳ ಮೆರುಗು ಹಾಗೂ ಜಯಘೋಷಗಳೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷೆ ಶಕುಂತಳಾ ಟಿ. ಶೆಟ್ಟಿ, ಕಸಾಪ ದ.ಕ. ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಹಾಗೂ ಕಡಬ ತಾಲೂಕು ಕಸಾಪ ಅಧ್ಯಕ್ಷ ಕೆ. ಸೇಸಪ್ಪ ರೈ ಅವರನ್ನು ತೆರೆದ ವಾಹನದಲ್ಲಿ ಗೌರವಪೂರ್ವಕವಾಗಿ ಸಭಾಂಗಣಕ್ಕೆ ಕರೆತರಲಾಯಿತು. ಈ ಸಂದರ್ಭದಲ್ಲಿ ಗಣ್ಯರು ಮತ್ತು ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
