
ಪುತ್ತೂರಿನ ದರ್ಬೆಯಲ್ಲಿ ಆಗಸ್ಟ್ 21ರಂದು ಸೈಬರ್ ಕೇಂದ್ರವೊಂದರಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಂಡೆಕೋಲು ನಿವಾಸಿ ಮುಬಾಶಿರ ಅವರು ಮಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿದ್ದಾರೆ. “ನಮಗೆ ಇದರಲ್ಲಿ ರಾಜಕೀಯವಾಗಲಿ, ಹಿಂದೂ-ಮುಸ್ಲಿಂ ಬಣ್ಣ ಕಟ್ಟುವುದು ಇಷ್ಟವಿಲ್ಲ. ಅವರು ಕ್ಷಮೆ ಕೇಳಿ ಆಸ್ಪತ್ರೆ ಖರ್ಚು ನೀಡಿದರೆ ಕೇಸ್ ಮುಂದುವರಿಸುವುದಿಲ್ಲ” ಎಂದು ತಿಳಿಸಿದ್ದಾರೆ.


ಪುತ್ತೂರು / ಮಂಗಳೂರು: ಪುತ್ತೂರು ನಗರದ ದರ್ಬೆಯಲ್ಲಿ ಆ.21ರಂದು ಸೈಬರ್ ಕೇಂದ್ರವೊಂದರಲ್ಲಿ ಜನನ ಪ್ರಮಾಣಪತ್ರ ಲ್ಯಾಮಿನೇಷನ್ ವಿಚಾರಕ್ಕೆ ಸಂಬಂಧಿಸಿ ನಡೆದ ಗಲಾಟೆ ಪ್ರಕರಣವು ತೀವ್ರ ರಾಜಕೀಯ ಹಾಗೂ ಕೋಮು ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಪ್ರಕರಣದ ಸಂತ್ರಸ್ತರಾದ ಮಂಡೆಕೋಲು ನಿವಾಸಿ ಮುಬಾಶಿರ ಅವರು ಮಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಹಾಜರಾಗಿ ಘಟನೆಯ ಪೂರ್ಣ ವಾಸ್ತವಾಂಶವನ್ನು ಬಿಚ್ಚಿಟ್ಟಿದ್ದಾರೆ.
ಘಟನೆ ಆರಂಭವಾಗಿದ್ದು ಹೇಗೆ? – ಮುಬಾಶಿರ ವಿವರಣೆ:
“ಆಗಸ್ಟ್ 21ರಂದು ನಾವು ದರ್ಬೆಯ ಸಂಗಮ್ ಹೋಟೆಲ್ಗೆ ಊಟಕ್ಕೆ ತೆರಳಿದ್ದೆವು. ಹೋಟೆಲ್ ಪಕ್ಕದಲ್ಲೇ ಸೈಬರ್ ಸೆಂಟರ್ ಇದ್ದ ಕಾರಣ ಆಧಾರ್ ಕಾರ್ಡ್ ಪ್ರಿಂಟ್ ಮತ್ತು ಮಗುವಿನ ಬರ್ತ್ ಸರ್ಟಿಫಿಕೇಟ್ ಲ್ಯಾಮಿನೇಷನ್ ಮಾಡಿಸಲು ಕೊಟ್ಟೆವು. ಆದರೆ ಸಿಬ್ಬಂದಿ ಲ್ಯಾಮಿನೇಷನ್ ಮಾಡುವಾಗ ಬರ್ತ್ ಸರ್ಟಿಫಿಕೇಟ್ ಸುಟ್ಟುಹೋಗಿದೆ (Burn). ಈ ಬಗ್ಗೆ ಪ್ರಶ್ನಿಸಿದಾಗ ಸಿಬ್ಬಂದಿ ಮಾಲಕಿಗೆ ಫೋನ್ ಮಾಡಿದರು. ಮಾಲಕಿ ಬರುವವರೆಗೂ ಕಾಯುವಂತೆ ತಿಳಿಸಿದ ಕಾರಣ ನಾವು ಕಾದೆವು.
ನಂತರ ಮಾಲಕಿ ಬಂದ ಬಳಿಕ, ಸೋಮವಾರಕ್ಕೆ ಪಾಸ್ಪೋರ್ಟ್ ಅಪಾಯಿಂಟ್ಮೆಂಟ್ ಇರುವುದರಿಂದ ಹೊಸ ಸರ್ಟಿಫಿಕೇಟ್ ಬೇಗ ಮಾಡಿಕೊಡಿ ಅಥವಾ ₹300 ಕೊಡಿ ನಾವೇ ಮಾಡಿಸಿಕೊಳ್ಳುತ್ತೇವೆ ಎಂದೆವು. ಆಗ ಅವರು ಆಧಾರ್ ಕಾರ್ಡ್ನ ₹200 ಮೈನಸ್ ಮಾಡಿ ₹100 ಕೊಡುವುದಾಗಿ ಹೇಳಿದರು. ಅದಕ್ಕೂ ನಾವು ಒಪ್ಪಿದಾಗ, ಅವರ ಮಗ ನಮ್ಮ ತಂದೆ-ತಾಯಿಗೆ ಅವಾಚ್ಯವಾಗಿ ಬೈಯಲು ಆರಂಭಿಸಿದನು. ಇದನ್ನು ನನ್ನ ಅಣ್ಣ ಮೊಬೈಲ್ನಲ್ಲಿ ವಿಡಿಯೋ ಮಾಡಲು ಮುಂದಾದಾಗ, ಅವರ ಮಗ ಬೆಂಚ್ ಮೇಲಿಂದ ಹಾರಿ ಬಂದು ಅಣ್ಣನಿಗೆ ಮತ್ತು ನಮ್ಮ ಮೇಲೆ ತೀವ್ರ ಹಲ್ಲೆ ನಡೆಸಿದನು” ಎಂದು ಮುಬಾಶಿರ ವಿವರಿಸಿದರು.
‘ಹಲ್ಲೆಯ ಬಳಿಕ ನಾವು ಆಸ್ಪತ್ರೆಗೆ ಹೋದೆವು; ನಂತರದ ಗಲಾಟೆ ನಮಗೆ ಗೊತ್ತಿಲ್ಲ’:


“ನಾವು ಜಗಳ ಮಾಡಲು ಹೋಗಿದ್ದರೆ ಸಣ್ಣ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರಲಿಲ್ಲ. ಮೊದಲು ಹಲ್ಲೆ ಮಾಡಿದ್ದೇ ಅವರು. ಹಲ್ಲೆಯಿಂದ ಗಾಯಗೊಂಡ ಕಾರಣ ನಾವು ತಕ್ಷಣ ಆಸ್ಪತ್ರೆಗೆ ದಾಖಲಾದೆವು ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದೆವು. ಪೊಲೀಸರು ಬಂದು ಅವರ ಮಗನನ್ನು ವಶಕ್ಕೆ ಪಡೆದ ನಂತರ ಅಲ್ಲಿ ಜೀಪಿಗೆ ಹತ್ತಿ ಗಲಾಟೆ ಮಾಡಿದ್ದು ಅಥವಾ ಬೇರೆ ಯಾರೋ ಬಂದು ಗಲಾಟೆ ಮಾಡಿದ್ದು ನಮಗೆ ಗೊತ್ತೇ ಇಲ್ಲ. ನಾವು ಸುಳ್ಯದವರು, ಅಲ್ಲಿ ನೆರೆದಿದ್ದವರು ಯಾರು ಕೂಡ ನಮ್ಮ ಸಂಬಂಧಿಕರಲ್ಲ, ನಮಗೆ ಪರಿಚಯಸ್ಥರೂ ಅಲ್ಲ” ಎಂದು ಸ್ಪಷ್ಟಪಡಿಸಿದರು.
ಕ್ಷಮೆ ಕೇಳಿ ಆಸ್ಪತ್ರೆ ಖರ್ಚು ಭರಿಸಿದರೆ ಕೇಸ್ ವಾಪಸ್: “ಈ ಸಣ್ಣ ಘಟನೆಯನ್ನು ಇಟ್ಟುಕೊಂಡು ಈಗ ರಾಜಕೀಯ, ಬಿಜೆಪಿ, ಕಾಂಗ್ರೆಸ್ ಹಾಗೂ ಹಿಂದೂ-ಮುಸ್ಲಿಂ ಎಂದು ಕೋಮು ಬಣ್ಣ ಕಟ್ಟಲಾಗುತ್ತಿದೆ. ನಮಗೆ ಇದ್ಯಾವುದರಲ್ಲೂ ಆಸಕ್ತಿಯಿಲ್ಲ. ಮನೆಯಲ್ಲಿ ಸಣ್ಣ ಮಕ್ಕಳಿರುವಾಗ ಪದೇಪದೆ ಕೋರ್ಟ್, ಕೇಸ್ ಅಂತ ಅಲೆಯುವುದು ನಮಗೂ ಕಷ್ಟ. ನಮ್ಮ ಬರ್ತ್ ಸರ್ಟಿಫಿಕೇಟ್ ಹಾಳು ಮಾಡಿದ್ದು ಹಾಗೂ ನಮ್ಮ ಮೇಲೆ ಹಲ್ಲೆ ನಡೆಸಿದ್ದು ಅವರದೇ ತಪ್ಪು.
-
ಹಲ್ಲೆ ನಡೆಸಿದ ಮಾಲಕಿಯ ಮಗ ಕ್ಷಮೆ ಯಾಚಿಸಬೇಕು.
-
ನಮಗೆ ಚಿಕಿತ್ಸೆಗೆ ತಗುಲಿರುವ ಸುಮಾರು ₹15,000 ಆಸ್ಪತ್ರೆ ಖರ್ಚನ್ನು ಭರಿಸಬೇಕು.
-
ಅವರು ದಾಖಲಿಸಿರುವ ಕೇಸ್ ವಾಪಸ್ ಪಡೆದರೆ, ನಾವು ಕೂಡ ಈ ಪ್ರಕರಣವನ್ನು ಇಲ್ಲಿಗೇ ಮುಕ್ತಾಯಗೊಳಿಸಲು ಸಿದ್ಧರಿದ್ದೇವೆ” ಎಂದು ಮುಬಾಶಿರ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದಾರೆ.
