
ಕಡಬ : ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2020ರಲ್ಲಿ ನಡೆದಿದ್ದ ಭೀಕರ ಆಸಿಡ್ ದಾಳಿ ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ ಪುತ್ತೂರಿನ ಸತ್ರ ನ್ಯಾಯಾಲಯವು, ಆರೋಪಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಭಾರಿ ಮೊತ್ತದ ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.


ಕಡಬ ತಾಲೂಕಿನ ಕೊಡಿಂಬಳ ಗ್ರಾಮದ ನಿವಾಸಿ ಜಯಾನಂದ. ಕೆ (60) ಶಿಕ್ಷೆಗೆ ಗುರಿಯಾದ ದೋಷಿ.
ನ್ಯಾಯಾಲಯದ ಮಹತ್ವದ ತೀರ್ಪು:ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಕ್ರಮಾಂಕ: 06/2020, ಕಲಂ: 354A, 509, 504, 506, 448, 307 ಹಾಗೂ 326A IPC ಪ್ರಕರಣದ ವಿಚಾರಣೆಯು ಮಂಗಳೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ (ಪೀಠಾಸೀನ: ಪುತ್ತೂರು) ನಡೆಯಿತು.
ಪ್ರಕರಣದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಮಾನ್ಯ ನ್ಯಾಯಾಧೀಶರಾದ ಶ್ರೀ ಸದಾನಂದ ನಾಗಪ್ಪ ನಾಯ್ಕ್ ಅವರು ಆರೋಪಿಗೆ ಈ ಕೆಳಗಿನಂತೆ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ:


ಕಲಂ 326A IPC (ಆಸಿಡ್ ದಾಳಿ): 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹3,00,000/- ನಗದು ದಂಡ. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 2 ವರ್ಷಗಳ ಸರಳ ಕಾರಾಗೃಹ ಶಿಕ್ಷೆ.ಕಲಂ 504 IPC (ಶಾಂತಿಭಂಗಕ್ಕೆ ಪ್ರಚೋದನೆ): 1 ವರ್ಷದ ಕಾರಾಗೃಹ ಶಿಕ್ಷೆ ಹಾಗೂ ₹5,000/- ನಗದು ದಂಡ. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 3 ತಿಂಗಳ ಸರಳ ಕಾರಾಗೃಹ ಶಿಕ್ಷೆ.
ದಕ್ಷ ತನಿಖೆ ಮತ್ತು ಪ್ರಬಲ ವಾದ ಮಂಡನೆ:ಪ್ರಕರಣದ ಆಗಿನ ತನಿಖಾಧಿಕಾರಿ ಹಾಗೂ ಪುತ್ತೂರು ಮಹಿಳಾ ಠಾಣೆಯ ಅಂದಿನ ಪೊಲೀಸ್ ನಿರೀಕ್ಷಕರಾಗಿದ್ದ (CI) ಕುಸುಮಧರ ಅವರು ಪ್ರಕರಣದ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ (Public Prosecutors) ಶ್ರೀಮತಿ ಕೃಷ್ಣವೇಣಿ, ಹರಿಶ್ಚಂದ್ರ ಉದ್ಯಾವರ, ಪ್ರಕಾಶ್ ಚಂದ್ರ ಶೆಟ್ಟಿ ಹಾಗೂ ಶ್ರೀಮತಿ ಜಯಂತಿ ಕೆ. ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿ ಆರೋಪ ಸಾಬೀತುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
